

ತಿ.ನರಸೀಪುರ: ಪ್ರತಿ ತಾಲೂಕಿನಲ್ಲಿಯೂ 10 ಕೋಟಿ ರೂ.ಗಳ ಶಿಕ್ಷಣ ನಿಧಿ ಸ್ಥಾಪಿಸಿ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲಾಗುವುದು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹದೇವ ಬಿದರಿ ತಿಳಿಸಿದರು.
ವಿವೇಕಾನಂದನಗರದಲ್ಲಿರುವ ವೀರಶೈವ ವಿದ್ಯಾರ್ಥಿನಿಲಯಕ್ಕೆ ಇತ್ತೀಚೆಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಪ್ರತಿ ತಾಲೂಕು ಘಟಕಗಳಲ್ಲಿ 10 ಕೋಟಿ ರೂ.ಗಳ ಶಿಕ್ಷಣ ನಿಧಿ ಸ್ಥಾಪಿಸಲಾಗುವುದು. ಅದರಿಂದ ಬರುವ ಬಡ್ಡಿ ಹಣವನ್ನು ತಾಲೂಕಿನ ಬಡ ವೀರಶೈವ-ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಳಸಿಕೊಳ್ಳಲಾಗುತ್ತದೆ. 2029ರ ವೇಳೆಗೆ ಸಮಾಜದಲ್ಲಿ ಶೇ.100 ಶಿಕ್ಷಿತರಾಗಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದರು.
ತಾಲೂಕಿನ ಸಾಕಷ್ಟು ಜನರು ಧಾರ್ಮಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕೊಡುಗೆ ನೀಡಿದ್ದಾರೆ. ನಮ್ಮಲ್ಲಿರುವ ಒಡಕು, ಗುಂಪುಗಾರಿಕೆಯಿಂದ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ಪ್ರತಿ ತಾಲೂಕು, ಹೋಬಳಿ, ಗ್ರಾಮಗಳಲ್ಲಿ ಸಮಾಜದವರು ಗುಂಪುಗಳಾಗಿ ಚದುರಿ ಹೋಗಿದ್ದೇವೆ. ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು ಎಲ್ಲಿಯವರೆಗೆ ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯವರೆಗೂ ಈಗಿನ ದುಸ್ಥಿತಿಯೇ ಮುಂದುವರಿಯುತ್ತದೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಂದಾಗಿ ಸಮುದಾಯ ಅಭಿವೃದ್ಧಿಗೆ ಮುಂದಾಗೋಣ ಎಂದು ಹೇಳಿದರು.
ವೀರಶೈವ-ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್‌ಎಂಆರ್ ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹಾದೇವಸ್ವಾಮಿ, ನಿರ್ದೇಶಕರಾದ ಸುಗಂಧರಾಜ್, ದೊಡ್ಡನಹುಂಡಿ ನಂಜುಂಡಸ್ವಾಮಿ, ಸುಧಾ ರಮೇಶ್, ಜ್ಞಾನೇಶ್ವರಿ, ಅಂಬಿಕಾ ಲೋಕೇಶ್, ತೋಂಟೇಶ್, ಮಲ್ಲಪ್ಪ, ನಂಜುಂಡಸ್ವಾಮಿ, ಪುರಸಭಾ ಸದಸ್ಯ ಎಸ್.ಕೆ.ಕಿರಣ್, ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್, ತಾಪಂ ಮಾಜಿ ಸದಸ್ಯ ಬೆ.ಗು.ಶಿವಸ್ವಾಮಿ, ಕುರುಬೂರು ಶಾಂತರಾಜು, ಮಾಯಪ್ಪ, ಕುಮಾರ್, ಕಾರ್ಯದರ್ಶಿ ಪರಶಿವಮೂರ್ತಿ, ನಿವೃತ್ತ ಕೆಇಬಿ ನೌಕರ ಸಿದ್ಧಲಿಂಗಸ್ವಾಮಿ, ಹಾಲಿ ಡೇರಿ ಮಾಜಿ ಅಧ್ಯಕ್ಷ ಬಿ.ಮಂಟೇಲಿಂಗಪ್ಪ, ನಾಗೇಶ್, ಶೇಖರ್, ಪುರಸಭೆ ಮಾಜಿ ಅಧ್ಯಕ್ಷ ವೀರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಚೌಹಳ್ಳಿ ಮಹಾದೇವಪ್ಪ, ಪಿಎಸಿಸಿಎಸ್ ಅಧ್ಯಕ್ಷ ಮಲ್ಲಣ್ಣ, ಶಂಕರ ಬಿದರಿ ಅಭಿಮಾನಿ ಬಳಗದ ಅಧ್ಯಕ್ಷ ನಿಂಗಪ್ಪ, ವಾಸವಳ್ಳಿ ಉಮೇಶಪ್ಪ, ಕಿರಗಸೂರು ಗ್ರಾಪಂ ಸದಸ್ಯ ಮಹದೇವಸ್ವಾಮಿ, ವಕೀಲ ಜ್ಞಾನೇಂದ್ರಮೂರ್ತಿ, ಮಾದಪ್ಪ, ಮಾಯಪ್ಪ ಇದ್ದರು.