ಆರ್​ಎಸ್​ಎಸ್​ನವರಂತೆ ವಸೂಲಿಗಿಳಿಯಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಂದ ರಾಜ್ಯಕ್ಕೆ ಸಿಕ್ಕಿದ್ದು ಪ್ರತಿ ನಾಯಕರಿಂದ ಕನಿಷ್ಠ ತಲಾ 1 ಲಕ್ಷ ರೂ. ದೇಣಿಗೆಯ ಭರವಸೆ!

kpcc 28 mar 20
Published on

ಬೆಂಗಳೂರು: ಆಂಧ್ರ, ತೆಲಂಗಾಣಗಳಲ್ಲಿ ಕರೊನಾ ಸೋಂಕು ಹರಡದಂತೆ ತಡೆಯುವ ಸರ್ಕಾರದ ಕೆಲಸದಲ್ಲಿ ಕೈ ಜೋಡಿಸಿರುವ ಟಾಲಿವುಡ್​ನ ಘಟಾನುಘಟಿಗಳು ಸ್ಪರ್ಧೆಗೆ ಬಿದ್ದವರಂತೆ ನಾನು ಇಷ್ಟು ಕೋಟಿ ದೇಣಿಗೆ ಕೊಡುತ್ತೇನೆ, ನಾನಿಷ್ಟು ಕೋಟಿ ಕೊಡುತ್ತೇನೆ ಎಂದು ಹಣವನ್ನು ರಾಜ್ಯಗಳ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಇನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್​) ಎಂದಿನಂತೆ ಸದ್ದುಗದ್ದಲವಿಲ್ಲದೇ ಯಾರಿಂದಲೂ ವಸೂಲಿಗೆ ಇಳಿಯದೇ, ಸ್ವ ಇಚ್ಛೆಯಿಂದ ದೇಣಿಗೆ ಯಾರಾದರೂ ನೀಡಿದರೆ ಅದನ್ನು ಸ್ವೀಕರಿಸಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಈ ನಡುವೆ, ದೇಣಿಗೆ ವಿಚಾರವೇ ಪ್ರತಿಷ್ಠೆಯ ವಿಚಾರವಾಗಿ ರಾಜಕೀಯದ ವಿಚಾರವಾಗಿ ಚರ್ಚೆಯ ಮುನ್ನೆಲೆಗೆ ಬರುತ್ತಿದೆ. ಇದಕ್ಕೆ ಕಾರಣವಾಗಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ!

ನಾವು ಆರ್​ಎಸ್​ಎಸ್ ಹಾಗೂ ಬಿಜೆಪಿಯವರ ಥರ ಬೀದಿಗಿಳಿದು ಕಾರ್ಯಕರ್ತರಿಂದೆಲ್ಲ ವಸೂಲಿ ಮಾಡುವುದಿಲ್ಲ, ಕರೊನಾ ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಕಾಂಗ್ರೆಸ್ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ತಲಾ ಕನಿಷ್ಠ 1 ಲಕ್ಷ ರೂ. ದೇಣಿಗೆ ನೀಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು, ನಮ್ಮ ಪಕ್ಷ ಆರ್​ಎಸ್​ಎಸ್ ರೀತಿ ಹಣ ಹಾಗೂ ದವಸ ಧಾನ್ಯ ಸಂಗ್ರಹಿಸಲು ಪ್ರೋತ್ಸಾಹ ನೀಡುವುದಿಲ್ಲ. ಇನ್ನು ಕಾರ್ಯಕರ್ತರು, ಅಭಿಮಾನಿಗಳು ದೇಣಿಗೆ ನೀಡುವುದಾದರೆ ಅವರು ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಮೂಲಕ ಹಣ ತಲುಪಿಸಬಹುದು ಎಂದರು.

ಸಂಗ್ರಹವಾದ ದೇಣಿಗೆ ಹೇಗೆ ಬಳಸಿಕೊಳ್ಳಬೇಕು ಎಂಬುದರ ವಿಚಾರವಾಗಿ ರಮೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಒಳಗೊಂಡಂತೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಈ ಸಮಿತಿ ಪರಿಸ್ಥಿತಿ ಅಧ್ಯಯನ ನಡೆಸಿ ದೇಣಿಗೆ ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಲಿದೆ. ರಾಜ್ಯ-ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ಹೇಗಿವೆ? ಅವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ? ಜನರಿಗೆ ಸರ್ಕಾರದಿಂದ ಏನು ಸಿಗಬೇಕಿದೆ ಎಂಬ ಅಂಶಗಳ ಬಗ್ಗೆ ಈ ಸಮಿತಿ ಪರಿಶೀಲಿಸಲಿದೆ. ಅಗತ್ಯ ಇರುವವರಿಗೆ ಊಟ ನೀಡಲು ಇಂದಿರಾ ಕ್ಯಾಂಟೀನ್ ಬಳಸಿಕೊಂಡು ಗುಣಮಟ್ಟದ ಊಟ ನೀಡುವಂತೆ ನಮ್ಮ ಪಕ್ಷ ಒತ್ತಾಯ ಮಾಡುತ್ತಿದೆ ಎಂದು ತಿಳಿಸಿದರು.

ಕರೊನಾ ನಿಯಂತ್ರಣ ವಿಚಾರವಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇತರೆ ನಾಯಕರುಗಳು ರಾಷ್ಟ್ರಮಟ್ಟದಲ್ಲಿ ಸರ್ಕಾರಕ್ಕೆ ಸಹಕರಿಸುತ್ತಿದ್ದಾರೆ. ರಾಜ್ಯದಲ್ಲಿ ನಾವೆಲ್ಲರೂ ಸರ್ಕಾರದ ಜತೆಗಿರಲು ನಿರ್ಧರಿಸಿದ್ದೇವೆ. ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ರಾಜ್ಯಪಾಲರು ಅಥವಾ ಸಿಎಂಗೆ ಮನವಿ ಸಲ್ಲಿಸಬೇಕಾಗುತ್ತದೆ ಎಂದರು.

ಕೇಂದ್ರ ಸರ್ಕಾರದಿಂದ ಉತ್ತಮ ಕೆಲಸ

ಮಹಾಮಾರಿ ಕರೊನಾ ಎಲ್ಲ ಕಡೆ ಹಬ್ಬಿ, ಜನರನ್ನು ಆತಂಕಕ್ಕೀಡು ಮಾಡಿದೆ. ಪ್ರಧಾನಿ 21 ದಿನ ದೇಶಾದ್ಯಂತ ಲಾಕ್​ಡೌನ್ ಘೊಷಿಸಿದ್ದನ್ನು ಸ್ವಾಗತಿಸಿ, ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ. ತಡವಾಗಿಯಾದರೂ ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಕರೊನಾ ವೈರಸ್​ಗೆ ಔಷಧವಿಲ್ಲ, ಸೋಷಿಯಲ್ ಡಿಸ್ಟೆನ್ಸ್ ಕಾಪಾಡುವುದು ಅಗತ್ಯ. ನಿರ್ಮಲಾ ಸೀತಾರಾಮನ್ ಕೆಲವು ಘೊಷಣೆ ಮಾಡಿದ್ದಾರೆ, 3 ತಿಂಗಳ ಇಎಂಐ ಮುಂದೂಡಿದ್ದನ್ನು ಸ್ವಾಗತಿಸುತ್ತೇವೆ ಎಂದರು. ಸರ್ಕಾರ ರೈತರ ಬೆಳೆಗಳನ್ನು ಹಾಪ್​ಕಾಮ್ಸ್ ಮೂಲಕ ಖರೀದಿಸಬೇಕು, ರೇಷ್ಮೆಗೂಡನ್ನೂ ಖರೀದಿಸಬೇಕು. ಇಂದಿರಾ ಕ್ಯಾಂಟೀನನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ವಿದೇಶದಿಂದ ಬಂದವರನ್ನು ಐಸೋಲೇಷನ್​ನಲ್ಲಿ ಇಡಬೇಕು, ಅವರು ಮನೆಯಲ್ಲೇ ಕ್ವಾರಂಟೈನ್ ಮಾಡುತ್ತೇವೆ ಎನ್ನುತ್ತಾರೆ. ಅದೇಗೆ ಕ್ವಾರಂಟೈನ್ ಮಾಡುತ್ತಾರೋ, ನಿರ್ವಹಣೆ ಮಾಡುತ್ತಾರೋ ಗೊತ್ತಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net