1.69 ಕೋಟಿ ರೂ. ಉಳಿತಾಯ ಬಜೆಟ್

15-RNR-01
Published on

ರಾಣೆಬೆನ್ನೂರ: ಸ್ಥಳೀಯ ನಗರಸಭೆ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ 2022-23ನೇ ಸಾಲಿನ ಆಯವ್ಯಯ ಮಂಡನಾ ಸಭೆಯಲ್ಲಿ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಒಟ್ಟು 1.69 ಕೋಟಿ ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು.

ನಗರಸಭೆಯ ಆರಂಭಿಕ ಶುಲ್ಕ 18.67 ಕೋಟಿ ರೂ., ರಾಜಸ್ವ ಸ್ವೀಕೃತಿ 34.68 ಕೋಟಿ ರೂ., ಬಂಡವಾಳ ಸ್ವೀಕೃತಿ 10.10 ಕೋಟಿ ರೂ., ಅಸಾಮಾನ್ಯ ಸ್ವೀಕೃತಿ 17.79 ಕೋಟಿ ರೂ., ಸೇರಿ ಒಟ್ಟು 81.24 ಕೋಟಿ ರೂ. ನಗರಸಭೆಯ ಸ್ವೀಕೃತಿಯಾಗಿದೆ. ರಾಜಸ್ವ ಪಾವತಿ 27.30 ಕೋಟಿ ರೂ., ಬಂಡಾವಳ ಪಾವತಿ 22.24 ಕೋಟಿ ರೂ., ಹಾಗೂ ಅಸಾಮಾನ್ಯ ಪಾವತಿ 19.13 ಕೋಟಿ ರೂ. ಆಗಿದ್ದು, ಅಂದಾಜು 1.69 ಕೋಟಿ ರೂ. ಉಳಿತಾಯವಾಗಲಿದೆ.

ಫುಡ್​ಕೋರ್ಟ್​ಗೆ 2 ಕೋಟಿ ರೂ.,: ಸರ್ಕಾರಿ ಶಾಲೆಗಳ ಗೋಡೆ ಮೇಲೆ ಬರಹಕ್ಕೆ 5 ಲಕ್ಷ ರೂ., ಮುನ್ಸಿಪಲ್ ಹೈಸ್ಕೂಲ್​ಗೆ ಬಣ್ಣ ಹಚ್ಚಲು 10 ಲಕ್ಷ ರೂ., ಅಭಿವೃದ್ಧಿಗೆ 25 ಲಕ್ಷ ರೂ., ವಿದ್ಯುತ್ ಚಿತಾಗಾರ ನಿರ್ವಣಕ್ಕೆ 25 ಲಕ್ಷ ರೂ., ಫುಡ್​ಕೋರ್ಟ್ ನಿರ್ವಣಕ್ಕೆ 2 ಕೋಟಿ ರೂ., ನಗರದ ಪ್ರಮುಖ ವೃತ್ತಗಳಲ್ಲಿ ಕಾರಂಜಿ, ಲೈಟಿಂಗ್ ವ್ಯವಸ್ಥೆಗೆ 60 ಲಕ್ಷ ರೂ., ತರಕಾರಿ ಮಾರುಕಟ್ಟೆ ನಿರ್ವಣಕ್ಕೆ 3.50 ಕೋಟಿ ರೂ., ನಗರದ ಪ್ರಮುಖ ಬೀದಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು 50 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.

ದುರಸ್ತಿಪಡಿಸಬೇಕಿದೆ 196 ಮಳಿಗೆ: ನಗರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ದುರಸ್ತಿಗೆ 75 ಲಕ್ಷ ರೂ. ಮೀಸಲಿಡಲಾಗಿದೆ. ಈ ಅನುದಾನ ಸಾಲುವುದಿಲ್ಲ. ಹೀಗಾಗಿ, ಹೆಚ್ಚು ಹಣ ನೀಡಬೇಕು. ಅಲ್ಲದೆ, ಎಷ್ಟು ಮಳಿಗೆಗಳು ಹಾಳಾಗಿವೆ. ಎಷ್ಟು ಮಳಿಗೆ ದುರಸ್ತಿ ಮಾಡಿಸಬೇಕು ಎಂಬ ಮಾಹಿತಿ ನೀಡಬೇಕು ಎಂದು ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಒತ್ತಾಯಿಸಿದರು. ಆಗ ಕಂದಾಯ ಅಧಿಕಾರಿ ಬಾಲಾಜಿರಾವ್ ಮಾತನಾಡಿ, ನಗರದಲ್ಲಿ 1,206 ಮಳಿಗೆಗಳಿವೆ. ಅವುಗಳಲ್ಲಿ 196 ಮಳಿಗೆಗಳನ್ನು ದುರಸ್ತಿಪಡಿಸಬೇಕು ಎಂದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಕಸ್ತೂರೆವ್ವ ಚಿಕ್ಕಬಿದರಿ, ಆಯುಕ್ತ ಉದಯಕುಮಾರ ಹಾಗೂ ಎಲ್ಲ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net