ರಾಜಧಾನಿಯಲ್ಲಿ 1.53 ಲಕ್ಷ ಗಣೇಶ ವಿಸರ್ಜನೆ

ganesh
Published on

ಬೆಂಗಳೂರು: ರಾಜಧಾನಿಯಲ್ಲಿ ಸೋಮವಾರ 1,53,965 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ಇದರಲ್ಲಿ 10,357 ಪ್ಲಾಸ್ಟರ್ ಆಫ್​​ ಪ್ಯಾರೀಸ್( ಪಿಒಪಿ) ಗಣೇಶಮೂರ್ತಿ ವಿಸರ್ಜಿಸಿರುವುದು ಕಂಡುಬಂದಿದೆ.

ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಸೇರಿ 39 ಕೆರೆಗಳಲ್ಲಿ ಹಾಗೂ 419 ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜಿಸಲಾಗಿದೆ. ಕೆಲವೆಡೆ ವಸತಿ ಪ್ರದೇಶದಿಂದ ಕೆರೆಗಳು ದೂರ ಇರುವ ಹಿನ್ನೆಲೆಯಲ್ಲಿ ವಾರ್ಡ್‌ಗಳಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಸಂಚಾರಿ ವಿಸರ್ಜನಾ ಘಟಕಗಳಲ್ಲಿ(ಮೊಬೈಲ್ ಟ್ಯಾಂಕ್) ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಕೆರೆಗಳು ಕಲುಷಿತವಾಗದಂತೆ ತಡೆಗೆ ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಯಾವುದೇ ಕಾರಣಕ್ಕೂ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು. ನಿಗದಿಪಡಿಸಿದ ಸ್ಥಳಗಳಲ್ಲೇ ವಿಸರ್ಜಿಸಬೇಕು. ರಾಸಾಯನಿಕ ಬಣ್ಣಗಳು, ಥರ್ಮಕೊಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಾಸಾಯನಿಕ ಬಣ್ಣಗಳು, ಥರ್ಮಕೊಲ್ ಸೇರಿ ಇತರ ವಸ್ತು ಬಳಸಿ ಗಣೇಶ ಮೂರ್ತಿ ತಯಾರಿಸುತ್ತಿರುವವರಿಗೆ ದಂಡ ವಿಧಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿತ್ತು. ಆದರೂ, ಪಾಲಿಕೆ ವ್ಯಾಪ್ತಿಯಲ್ಲಿ ಒಂದೇ ದಿನ 10,357 ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜಿಸಲಾಗಿದೆ. ಎಲ್ಲ ವಲಯಗಳಗಿಂತ ದಕ್ಷಿಣ ವಲಯದಲ್ಲೇ ಅತಿ ಹೆಚ್ಚು ಪಿಒಪಿ ಗಣೇಶ ವಿಸರ್ಜಿಸಿರುವುದು ಬಹಿರಂಗವಾಗಿದೆ.

ಗಣೇಶ ಹಬ್ಬ ನಿಮಿತ್ತ ಪಾಲಿಕೆಯು ವಿಸರ್ಜನೆಗಾಗಿ ಕೆರೆಗಳು ಹಾಗೂ ಕಲ್ಯಾಣಿಗಳ ವ್ಯವಸ್ಥೆ ಮಾಡಲಾಗಿತ್ತು.ವಿಸರ್ಜನಾ ಕೇಂದ್ರಗಳಲ್ಲೂ ಪಾಳಿಯನುಸಾರ ನುರಿತ ಈಜುಗಾರರು ಸೇರಿ ಅಗತ್ಯ ಸಿಬ್ಬಂದಿ ನೇಮಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಸಿಟಿವಿ, ವಿದ್ಯುತ್ ದ್ವೀಪಗಳ ಅಳವಡಿಸಿದೆ. ವಿಸರ್ಜನಾ ಕೇಂದ್ರಗಳಲ್ಲಿ ಸಂಗ್ರಹವಾಗುವ ಹೂವು, ಬಾಳೆಯ ಕಂದು, ತಳಿರು ತೋರಣ ಸೇರಿ ಇತರ ವಸ್ತುಗಳ ಸಂಗ್ರಹಣೆಗೆ ಸಾಗಣೆಗೆ ವಾಹನ ವ್ಯವಸ್ಥೆ ಮಾಡಿದೆ. ಹೀಗಾಗಿ, ಸಾರ್ವಜನಿಕರು ಮೆರವಣಿಗೆ ಮೂಲಕ ಗಣೇಶ ಮೂರ್ತಿಗಳನ್ನು ಕರೆತಂದು ವಿಸರ್ಜಿಸುತ್ತಿರುವ ದೃಶ್ಯ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net