

ಗುಂಡ್ಲಪೇಟೆ: ಅರಣ್ಯ ಸಂರಕ್ಷಣೆಯಲ್ಲಿ ಆದಿವಾಸಿಗಳ ಪಾತ್ರ ಬಹಳ ಪ್ರಮುಖವಾಗಿದ್ದು, ಅರಣ್ಯ ಇಲಾಖೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್ ತಿಳಿಸಿದರು.
ಬಂಡೀಪುರದಲ್ಲಿ ಶನಿವಾರ ಆಯೋಜಿಸಿದ್ದ ಆದಿವಾಸಿಗಳ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿ, ಹುಲಿ ಯೋಜನೆ ವ್ಯಾಪ್ತಿಯಲ್ಲಿ ಜೇನುಕುರುಬ, ಬೆಟ್ಟ ಕುರುಬ, ಸೋಲಿಗ, ಕಾಡು ಕುರುಬ ಸೇರಿದಂತೆ 53 ಬುಡಕಟ್ಟು ಜನಾಂಗದವರು ಹಾಡಿಗಳಲ್ಲಿ ನೆಲೆಸಿದ್ದಾರೆ. ಹಿಂದಿನಿಂದಲೂ ಅರಣ್ಯ ಸಂರಕ್ಷಣೆಯ ಭಾಗವಾಗಿದ್ದು ಹುಲಿ ಮತ್ತು ಕಾಡಿನ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಗೆ ನೆರವು ನೀಡುತ್ತಿದ್ದಾರೆ. ಆದ್ದರಿಂದ ಆದಿವಾಸಿ ಸಮುದಾಯದ ಕುಂದು ಕೊರತೆಗಳ ಪರಿಹಾರ ಹಾಗೂ ಅವರಿಗೆ ಅರಣ್ಯ ಇಲಾಖೆಯಿಂದ ಯೋಜನೆ ರೂಪಿಸಲಾಗಿದೆ ಎಂದರು.
ಆದಿವಾಸಿ ಮಹಿಳೆಯರಿಗೆ ಸ್ವಸಹಾಯ ಸಂಘಗಳನ್ನು ನಿರ್ಮಿಸಿ ಅವರಿಗೆ 45 ದಿನಗಳು ಲಂಟಾನದಿಂದ ಕರಕುಶಲ ಉಪಕರಣಗಳ ತಯಾರಿಸುವ ತರಬೇತಿ, ಉಚಿತ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ಮತ್ತು ರೀಫಿಲ್ಲಿಂಗ್ ಸೌಲಭ್ಯ, ಜಮೀನು ಹೊಂದಿರುವವರ ಕೃಷಿ ಚಟುವಟಿಕೆಗೆ ಉಚಿತವಾಗಿ ಭೂಮಿ ಉಳುಮೆ, ರಸ ಗೊಬ್ಬರ ಮತ್ತು ಬೀಜ ವಿತರಣೆ, ಕಾಡಂಚಿನ ರೈತರಿಗೆ ಜೇನು ಸಾಕಣೆ ತರಬೇತಿ ನೀಡಿ ಜೇನು ಪೆಟ್ಟಿಗೆ ವಿತರಿಸಲಾಗುವುದು. ಅಲ್ಲದೆ ಆದಿವಾಸಿ ಯುವಕರ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ಹಸಿರು ವಿದ್ಯಾರ್ಥಿ ವೇತನ, ಕಾಡಂಚಿನ ಆದಿವಾಸಿ ಹಾಡಿಗಳಿಗೆ ತುರ್ತು ಆರೋಗ್ಯ ಪರಿಸ್ಥಿತಿಗಳಲ್ಲಿ ಉಪಯೋಗಕ್ಕಾಗಿ ಆಂಬುಲೆನ್ಸ್ ಸೇವೆ, ಮಾನವ-ವನ್ಯಪ್ರಾಣಿ ಸಂಘರ್ಷದಲ್ಲಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು, ಬುಡಕಟ್ಟು ಜನಾಂಗದ ಹಾಡಿಗಳಲ್ಲಿ ಚಾವಡಿಗಳ ದುರಸ್ತಿ, ಆಯ್ದ ಬುಡಕಟ್ಟು ಜನಾಂಗದ ಹಾಡಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಹಿಳೆಯರು ಮತ್ತು ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಡ್ರೈವಿಂಗ್, ಟೈಲರಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಏರ್ಪಡಿಸಲಾಗುವುದು. ಈ ಎಲ್ಲ ಹಾಡಿ ಜನರ ಅಭಿವೃದ್ಧಿಗಾಗಿ ಬಂಡೀಪುರ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಯಡಿ ಈ ವರ್ಷ 1.25 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ 25ಕ್ಕೂ ಹೆಚ್ಚು ಆದಿವಾಸಿ ಮುಖಂಡರು ಬುಡಕಟ್ಟು ಜನಾಂಗದವರ ಹಾಡಿಗಳಿಗೆ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದರು. ನಂತರ ಎಲ್ಲರನ್ನೂ ಸಫಾರಿಗೆ ಕಳುಹಿಸಲಾಯಿತು. ಎಸಿಎಫ್ ನವೀನ್, ಆರ್‌ಎಫ್‌ಒ ದೀಪಾ ಮತ್ತಿತರರಿದ್ದರು.