ಕುಂದಾಪುರ: ವಿಪ್ರ ಬಂಧುಗಳು, ಸಮಾಜ ಒಂದಾಗಬೇಕು. ಯುವ ಮನಸ್ಸುಗಳ ಬೇಸುಗೆಯಾಗಬೇಕೆಂಬ ಉದ್ದೇಶದಿಂದ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ, ಉಡುಪಿ ಜಿಲ್ಲೆ ಯುವ ವಿಪ್ರ ವೇದಿಕೆ ನೇತೃತ್ವದಲ್ಲಿ ಪ್ರಥಮ ಜಿಲ್ಲಾ ಯುವ ಸಮಾವೇಶ ಬಿದ್ಕಲ್‌ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಏ.26, 27ರಂದು ನಡೆಯಲಿದೆ ಎಂದು ಯುವ ವಿಪ್ರ ವೇದಿಕೆ ಅಧ್ಯಕ್ಷೆ ಪವಿತ್ರಾ ಅಡಿಗ ಹೇಳಿದರು.
ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿ, ಯುವ ಸಮಾವೇಶದಲ್ಲಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಪ್ರ ಸರಿಗಮಪ, ಜಾನಪದ ನೃತ್ಯ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ಯುವ ಕವಿ, ರಸಪ್ರಶ್ನೆ, ಚಿತ್ರಕಲೆ, ಪುರುಷರಿಗೆ ಕ್ರಿಕೆಟ್, ವಾಲಿಬಾಲ್, ಫ್ಯಾಶನ್ ಶೋ, ಮಹಿಳೆಯರಿಗೆ ಕ್ರಿಕೆಟ್, ಥ್ರೋಬಾಲ್, ಯುವಕ-ಯುವತಿಯರಿಗೆ ವೈಯಕ್ತಿಕ ಆಟೋಟ ಸ್ಪರ್ಧೆ, ಹಗ್ಗಜಗ್ಗಾಟ ಮೊದಲಾದ ಸ್ಪರ್ಧೆ ನಡೆಯಲಿದೆ. 27ರಂದು ಸಾರ್ವಜನಿಕರಿಗಾಗಿ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ, ಬೃಹತ್ ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ, ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದರು.
26ರಂದು ಬೆಳಗ್ಗೆ ಗುಡ್ಡಟ್ಟು ವಲಯ ಅಧ್ಯಕ್ಷ ಸುಬ್ರಹ್ಮಣ್ಯ ಉಡುಪ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ವೈ.ಸುಧಾಕರ ಭಟ್, ವಾದಿರಾಜ ಭಟ್, ಶ್ರೀಧರ ಉಡುಪ ಮತ್ತಿತರರು ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶೃಂಗೇರಿ ಶ್ರೀ ಶಾರದಾ ಪೀಠ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ ಉದ್ಘಾಟಿಸಲಿದ್ದು, ಸಂದೀಪ ಕುಮಾರ್ ಮಂಜ, ಗಣೇಶ ರಾವ್ ಕುಂಭಾಶಿ, ಕಾಂತಿ ರಾವ್, ಸೌಜನ್ಯಾ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿರುವರು.
27ರಂದು ಬೆಳಗ್ಗೆ ಪಥ ಸಂಚಲನವನ್ನು ಮಾಜಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಲಿದ್ದು, ಗಣೇಶ ಬಾಯರಿ, ಅನಂತಪದ್ಮನಾಭ ಅಡಿಗ ಗುಡ್ಡಟ್ಟು, ಕೃಷ್ಣಾನಂದ ಚಾತ್ರ ಮತ್ತಿತರರು ಉಪಸ್ಥಿತರಿರುವರು. ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದಾರೆ. ಯುವ ವಿಪ್ರ ವೇದಿಕೆ ಅಧ್ಯಕ್ಷೆ ಪವಿತ್ರಾ ಅಡಿಗ ಅಧ್ಯಕ್ಷತೆ ವಹಿಸಲಿದ್ದಾರೆ. ಪಂಚಾಂಗಕರ್ತ ವಾಸುದೇವ ಜೋಯಿಸ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ ಅವರನ್ನು ಸನ್ಮಾನಿಸಲಾಗುವುದು ಎಂದರು.
ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಎಸ್.ಕೃಷ್ಣಾನಂದ ಚಾತ್ರ, ರಾಘವೇಂದ್ರ ಅಡಿಗ, ವಾದಿರಾಜ ಹೆಬ್ಬಾರ್ ಇದ್ದರು.