ಕಾಸರಗೋಡು: ಲೋಕಸಭಾ ಚುನಾವಣೆ ಮತ ಎಣಿಕೆ ಸಿದ್ಧತೆ ಪ್ರಕ್ರಿಯೆ ಕಾಸರಗೋಡು ಜಿಲ್ಲೆಯಲ್ಲಿ ಪೂರ್ತಿಗೊಂಡಿರುವುದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಇನ್ಬಾಶೇಖರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೆರಿಯಾ ಕೇರಳ ಕೇಂದ್ರೀಯ ವಿವಿ ಗಂಗೋತ್ರಿ, ಕಾವೇರಿ ಮತ್ತು ಸಬರಮತಿ ಎಂಬ ಬ್ಲಾಕ್‌ಗಳಲ್ಲಾಗಿ ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುವುದು. ಏಳು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಇಲ್ಲಿ ನಡೆಯಲಿದೆ. ಗಂಗೋತ್ರಿ ಬ್ಲಾಕ್‌ನಲ್ಲಿ ಮಂಜೇಶ್ವರ, ಕಾಸರಗೋಡು ಮತ್ತು ಉದುಮ ಕ್ಷೇತ್ರಗಳ ಎಣಿಕೆ ಕಾರ್ಯ ಕಾವೇರಿ ಬ್ಲಾಕ್‌ನಲ್ಲಿ ಕಾಞಂಗಾಡ್, ತ್ರಿಕ್ಕರಿಪುರ, ಪಯ್ಯನ್ನೂರು ಮತ್ತು ಕಲ್ಲೃಶ್ಶೇರಿ ಕ್ಷೇತ್ರಗಳ ಮತ ಎಣಿಕೆ ಕಾವೇರಿ ಬ್ಲಾಕ್‌ನಲ್ಲಿ ನಡೆಯಲಿದೆ. ಸಾಬರ್‌ಮತಿ ಕೇಂದ್ರದಲ್ಲಿ ಉಪ ಚುನಾವಣಾಧಿಕಾರಿ ನೇತೃತ್ವದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಒಟ್ಟು ೧೫೦೦ ಸಿಬ್ಬಂದಿ, ಒಂಬತ್ತು ಮಂದಿ ಅಭ್ಯರ್ಥಿಗಳು, ಒಂಬತ್ತು ಮುಖ್ಯ ಏಜೆಂಟರು ಮತ್ತು ೬೬೩ ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿರಲಿದ್ದಾರೆ.
ಮತ ಎಣಿಕೆ ಸಭಾಂಗಣದಲ್ಲಿ ಮೊಬೈಲ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಕೇಂದ್ರದೊಳಗೆ ಯಾವುದೇ ಇಲೆಕ್ಟ್ರಾನಿಕ್ ಸಾಧನಗಳಾದ ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಬಳಕೆ ಮಾಡುವಂತಿಲ್ಲ. ಯಮುನಾ ಬ್ಲಾಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಮಾಧ್ಯಮ ಕೇಂದ್ರದಲ್ಲಿ ಮಾತ್ರ ಮೊಬೈಲ್ ಫೋನ್‌ಗಳ ಬಳಕೆಗೆ ಅನುಮತಿ ಕಲ್ಪಿಸಲಾಗಿದೆ. ಆ ಕ್ಯಾಂಪಸ್‌ಗೆ ಪ್ರವೇಶಿಸುವ ಎಲ್ಲ ವಾಹನಗಳಿಗೆ ವಾಹನದ ವಿಶೇಷ ಪಾಸ್ ಕಡ್ಡಾಯಗೊಳಿಸಲಾಗಿದೆ.
ಎಲ್ಲ ಉದ್ಯೋಗಿಗಳಿಗೆ, ಮತ ಎಣಿಕೆ ಕೇಂದ್ರಗಳಿಗೆ ಬರುವ ವಾಹನಗಳಿಗೆ ಚುನಾವಣಾ ಅಧಿಕಾರಿ ನೀಡಿದ ಕ್ಯೂಆರ್ ಕೋಡ್ ಐಡಿ ಕಾರ್ಡ್ ಪಾಸ್ ಕಡ್ಡಾಯವಾಗಿರಲಿದೆ.
ಮಾಧ್ಯಮ ಪ್ರತಿನಿಧಿಗಳು ಚುನಾವಣಾ ಆಯೋಗ ನೀಡಿರುವ ಅಧಿಕೃತ ಪತ್ರ ಹೊಂದಿರಬೇಕು. ಮತ ಎಣಿಕೆ ಪ್ರಕ್ರಿಯೆ ನಿರ್ದಿಷ್ಟ ಅಂತರದಲ್ಲಿ ಪತ್ರಕರ್ತರು ಸಣ್ಣ ಗುಂಪುಗಳಲ್ಲಾಗಿ ಚಿತ್ರೀಕರಿಸಿದ ನಂತರ ಮಾಧ್ಯಮ ಕೇಂದ್ರಕ್ಕೆ ಹಿಂತಿರುಗಬೇಕಾಗಿದೆ. ಎಣಿಕೆ ಸಭಾಂಗಣದಲ್ಲಿ ಟ್ರೈಪಾಡ್‌ಗಳೊಂದಿಗೆ ಛಾಯಾಗ್ರಹಣಕ್ಕೆ ಅನುಮತಿ ನೀಡಲಾಗುವುದಿಲ್ಲ. ಎಣಿಕೆ ಪ್ರಗತಿ ಮತ್ತು ಫಲಿತಾಂಶ ಮಾಧ್ಯಮ ಕೇಂದ್ರಗಳಿಂದಲೇ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣಾ ಸಹಾಯಕ ಜಿಲ್ಲಾಧಿಕಾರಿ ಪಿ.ಅಖಿಲ್, ಮಾಧ್ಯಮ ನೋಡಲ್ ಅಧಿಕಾರಿ ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಗೋಷ್ಠಿಯಲ್ಲಿದ್ದರು.
ಪೊಲೀಸ್ ಪಡೆ ನಿಯೋಜನೆ
ಮತ ಎಣಿಕೆ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು ೧೨೦೦ ಮಂದಿ ಒಳಗೊಂಡ ಪೊಲೀಸ್ ಪಡೆ ನಿಯೋಜಿಸಲಾಗುವುದು. ವಿಜಯೋತ್ಸವ ನಡೆಯುವ ಕೇಂದ್ರಗಳ ಕುರಿತು ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಭದ್ರತೆ ಖಾತ್ರಿಪಡಿಸಲಾಗುವುದು. ಘರ್ಷಣೆ ಸಾಧ್ಯತೆಯಿರುವ ಪ್ರದೇಶಗಳ ಮೇಲೆ ಪೊಲೀಸರ ವಿಶೇಷ ನಿಗಾ ಇರಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ತಿಳಿಸಿದರು.