

ಶಂಕರನಾರಾಯಣ: ಸೌಡ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮಾದರಿ ವಸತಿ ಶಾಲೆಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಂಗಳವಾರ ಭೇಟಿ ನೀಡಿದರು. ಬೃಹತ್ ಗಾತ್ರದ ಗುಡ್ಡದ ಬುಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾಲೆ ಕಳಪೆ ಕಾಮಗಾರಿಯಿಂದ ಕಟ್ಟದ ಭದ್ರತೆಗಾಗಿ ನಿರ್ಮಿಸಲಾದ ವಾಲ್ ವಾಲಿದೆ.
ಮಳೆಗಾಲದಲ್ಲಿ ಗುಡ್ಡ ಜರಿತದಿಂದ ಕಟ್ಟಡಕ್ಕೆ ಅಪಾಯದ ಭೀತಿ ಇರುವ ಬಗ್ಗೆ ಕಾಂಗ್ರೆಸ್ ನಿಯೋಗ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಮಳೆಗಾಲದಲ್ಲಿ ಭೇಟಿ ನೀಡಿ, ಪರಿಶೀಲಿಸಿದ್ದರು. ತಂತ್ರಜ್ಞರ ವರದಿ ನಂತರ ಕಾಮಗಾರಿ ಮುಂದುವರಿಸುವಂತೆ ಮಾಜಿ ಶಾಸಕ ಸೂಚನೆ ನೀಡಿದ್ದರು. ಆದರೆ ಗುತ್ತಿಗೆ ಸಂಸ್ಥೆ ಯಾರ ಮಾತಿಗೂ ಬೆಲೆ ನೀಡದಿರುವುದರಿಂದ ಉಡುಪಿ ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ಕೆಡಿಪಿ ಸದಸ್ಯ ಪ್ರಸನ್ನಕುಮಾರ ಶೆಟ್ಟಿ ಕೆರಾಡಿ ಇತ್ತೀಚೆಗೆ ಪ್ರಶ್ನೆ ಮಾಡಿದ್ದರು.
ಶಂಕರನಾರಾಯಣ ಗ್ರಾಪಂ ಅಧ್ಯಕ್ಷ ಉಮೇಶ ಶೆಟ್ಟಿ ಕಲ್ಗದ್ದೆ, ಸದಸ್ಯ ರವಿ ಕುಲಾಲ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣ ಸ್ವಾಮಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಬೆಂಗಳೂರು ಕಾರ್ಯನಿರ್ವಾಹಕ ಇಂಜಿನಿಯರ್ ಜಯಚಂದ್ರ, ಕ್ರೈಸ್ ಸಂಸ್ಥೆಯ ಎಇಇ ರಾಮು, ಸಂಸ್ಥೆಯ ಸುರೇಶ್, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.