ಕುಂದಾಪುರ: ಜಿಲ್ಲೆಯ ಅತಿ ಉದ್ದದ ಸೇತುವೆಗಳಲ್ಲಿ ಒಂದಾಗಿರುವ ಕುಂದಾಪುರ ಸಮೀಪದ ಅರಾಟೆ ಸೇತುವೆ ದುರಸ್ತಿ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಎರಡು ತಿಂಗಳಿನಿಂದ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ್ದು, ಹೊಸ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸಾಗುವ ವಾಹನಗಳಿಗೆ ಕನ್ನಡಕುದ್ರು ಎಂಬಲ್ಲಿ ಡೈವರ್ಶನ್ ಕೊಡಲಾಗಿದ್ದು, ರಾತ್ರಿ ವೇಳೆ ವಾಹನ ಚಾಲಕರಿಗೆ ಡೈವರ್ಶನ್ ಇರುವುದು ಮತ್ತು ರಸ್ತೆ ಮುಚ್ಚಿರುವುದು ಗೊತ್ತಾಗಲು ಡಿವೈಡರ್‌ನ ಬಳಿ ಇಂಡಿಕೇಟರ್ ಅಳವಡಿಸಲಾಗಿದೆ. ಆದರೆ ಕೆಲವು ದಿನಗಳಿಂದ ಇಂಡಿಕೇಟರ್ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ರಾತ್ರಿ ಸಂಚರಿಸುವ ವಾಹನ ಸವಾರರಿಗೆ ಕಂಟಕವಾಗುವ ಸಾಧ್ಯತೆ ಇದೆ.
ಇಂಡಿಕೇಟರ್ ಕೆಟ್ಟುಹೋಗಿದ್ದರೂ ಇದುವರೆಗೆ ದುರಸ್ತಿಪಡಿಸಿಲ್ಲ. ಕನ್ನಡಕುದ್ರು ಮತ್ತು ಅರಾಟೆ ಬಳಿ ನಿರ್ಮಿಸಲಾಗಿರುವ ಡೈವರ್ಶನ್ ಬಳಿ ಎರಡು ಪ್ರತ್ಯೇಕ ಅಪಘಾತ ಕೂಡ ನಡೆದಿದ್ದು, ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಇಷ್ಟಾದರೂ ವಾಹನ ಚಾಲಕರ ಮತ್ತು ಪ್ರಯಾಣಿಕರ ಸುರಕ್ಷತೆ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಸಂಬಂಧಪಟ್ಟ ಗುತ್ತಿಗೆದಾರರು ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.