

ಕಾಸರಗೋಡು: ಪರಪ್ಪ ಬ್ಲಾಕ್ ಪಂಚಾಯಿತಿ ವಾರ್ಷಿಕ ಯೋಜನೆ ಅಂಗವಾಗಿ ಸಾರ್ವಜನಿಕರಿಗೆ ಪೌಷ್ಟಿಕ ಮತ್ತು ಸುರಕ್ಷಿತ ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸಲು ಜಾರಿಗೆ ತರಲಾಗುತ್ತಿರುವ ‘ಉತ್ತಮ ಆಹಾರ, ಉತ್ತಮ ಆರೋಗ್ಯ’ ಯೋಜನೆಯ ಬ್ಲಾಕ್ಮಟ್ಟದ ಉದ್ಘಾಟನೆ ಬ್ಲಾಕ್ ಪಂಚಾಯಿತಿಯಲ್ಲಿ ಜರುಗಿತು.
ಕಿನನೂರಿನ ಕರಿಂದಲಂ ಗ್ರಾಮ ಪಂಚಾಯಿತಿಯಲ್ಲಿರುವ ಕೃಷಿ ಸೇವಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಎಂ.ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್ ಉದ್ಘಾಟಿಸಿದರು. ಸಹಾಯಕ ಕೃಷಿ ನಿರ್ದೇಶಕ ನಿಖಿಲ್ ನಾರಾಯಣನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಜಿನಿ ಕೃಷ್ಣನ್, ಬಿಡಿಒ ಬಿಜು ಕುಮಾರ್, ಕೃಷಿ ಸೇವಾಕೇಂದ್ರ ಸಹಾಯಕ ಮೋಹನನ್ ಮತ್ತು ವಾರ್ಡ್ ಸದಸ್ಯರಾದ ಕೈರಲಿ ಮತ್ತು ಧನ್ಯಾ ಉಪಸ್ಥಿತರಿದ್ದರು. ಕಿನನೂರು ಕರಿಂದಲಂ ಕೃಷಿ ಅಧಿಕಾರಿ ಜೆ.ಜಿಜಿ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ಸದಾನಂದನ್ ವಂದಿಸಿದರು.