ಬೆಂಗಳೂರು:ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸಲು ಬಿಯರ್, ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್) ದರ ಏರಿಕೆ ಸೇರಿ ಅಬಕಾರಿ ಪರವಾನಗಿ ನವೀಕರಣ ಶುಲ್ಕವೂ ಹೆಚ್ಚಿಸಿದ ಸರ್ಕಾರ, ಇದೀಗ ಮದ್ಯ ತಯಾರಿಸುವ ಉತ್ಪಾದಕರಿಗೂ ಶಾಕ್ ಕೊಟ್ಟಿದೆ.

ಹೆಚ್ಚುವರಿ ಸಂಪನ್ಮೂಲ ಕ್ರೋಢಿಕರಣ(ಎಆರ್ಎಂ) ಸಂಬಂಧ ಜಾರಿಗೆ ತರಲು ವಿವಿಧ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರುವ ಉದ್ದೇಶದಿಂದಾಗಿ ಅಬಕಾರಿ ಇಲಾಖೆ, ಇ-ರಾಜ್ಯ ಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಡಿಸ್ಟ್ರಿಲರಿ ಮತ್ತು ಬ್ರಿವರಿ ಬಾಟ್ಲಿಂಗ್ ಪರವಾನಗಿ ಶುಲ್ಕ(ವರ್ಷಕ್ಕೆ ) 1 ಲಕ್ಷ ರೂ.ನಿಂದ 2 ಲಕ್ಷ ರೂ.ಗೆ., ಬ್ರಿವರಿ(ಉತ್ಪಾದನೆ) ಶುಲ್ಕ 27 ಲಕ್ಷ ರೂ.ನಿಂದ 54 ಲಕ್ಷ ರೂ.ಗೆ ಹೆಚ್ಚಿಸಲು ಇಲಾಖೆ ಮುಂದಾಗಿದೆ. ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್) ಡಿಸ್ಟ್ರಿಲರಿ ಪರವಾನಗಿ( ಉತ್ಪಾದನೆ) ವಾರ್ಷಿಕ ಶುಲ್ಕ 45 ಲಕ್ಷ ರೂ.ನಿಂದ 90 ಲಕ್ಷ ರೂ.ಗೆ, ರಿಟೇಲ್ ವೆಂಡ್ ಆ್ ಬಲ್ಕ್ ಬಿಯರ್ ಸಂಬಂಧಿಸಿದ ಇಂಡಿಪೆಂಡೆಂಟ್ ಆರ್ವಿಬಿ ಲೈಸೆನ್ಸ್ ಶುಲ್ಕ 30 ಸಾವಿರ ರೂ.ನಿಂದ 3 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಕ್ಲಬ್ (ಸಿಎಲ್4), ಸ್ಟಾರ್ ಹೋಟೆಲ್ (ಸಿಎಲ್-6ಎ), ಹೋಟೆಲ್ ಮತ್ತು ವಸತಿ ಗೃಹ (ಸಿಎಲ್&7),ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), ಸಿಎಲ್-17 ಮತ್ತು ಸಿಎಲ್-18 ಮದ್ಯದಂಗಡಿಗಳಲ್ಲಿ ಅಟ್ಯಾಚ್ಡ್ ಆರ್ವಿಬಿ ಲೈಸೆನ್ಸ್ ಶುಲ್ಕ 15 ಸಾವಿರ ರೂ.ನಿಂದ 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಶುಲ್ಕ ಹೆಚ್ಚಳ ಕುರಿತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಸಹ ಕಲ್ಪಿಸಲಾಗಿದೆ.
40 ಸಾವಿರ ಕೋಟಿ ರೂ.ಗುರಿ: ರಾಜ್ಯದಲ್ಲಿ 12,614 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 80&100 ಕೋಟಿ ರೂ.ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ. 2025-26ನೇ ಸಾಲಿನಲ್ಲಿ 40 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಲಾಗಿದೆ. ಹೀಗಾಗಿ, ಆದಾಯ ಸಂಗ್ರಹಿಸುವ ಸಲುವಾಗಿ ಅಬಕಾರಿ ನವೀಕರಣ ಶುಲ್ಕವನ್ನು ಪರಿಸ್ಕರಿಸಲಾಗಿದೆ. ಅಲ್ಲದೆ, ಬಿಯರ್, ಚೀಪ್ ಲಿಕ್ಕರ್, ಐಎಂಎಲ್ ಲಿಕ್ಕರ್ ದರವನ್ನು ಈಗಾಗಲೇ ಹೆಚ್ಚಿಸಲಾಗಿದೆ.