

ಬೆಂಗಳೂರು: ‘ಲವ್‌ಮಾಕ್‌ಟೇಲ್’ ಚಿತ್ರದ ಮೂಲಕ ಯಶಸ್ಸಿನ ಬೆನ್ನೇರಿ ಹೊರಟಿರುವ ನಟ ಡಾರ್ಲಿಂಗ್ ಕೃಷ್ಣ ಇತ್ತೀಚೆಗಷ್ಟೇ ‘ಶ್ರೀ ಕೃಷ್ಣ @ಜೀಮೇಲ್.ಕಾಮ್’ ಹೊಸ ಸಿನಿಮಾವೊಂದಕ್ಕೆ ನಾಯಕನಾಗಿದ್ದರು. ಶೀರ್ಷಿಕೆ ಮೂಲಕವೇ ಆ ಸಿನಿಮಾ ಗಮನಸೆಳೆಯುತ್ತಿತ್ತು. ಇದೀಗ ಇದೇ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಅಚ್ಚರಿ ಏನೆಂದರೆ, ‘ದಯಮಾಡಿ ನಮ್ಮ ಈ ಮುಹೂರ್ತ ಕಾರ್ಯಕ್ರಮಕ್ಕೆ ಯಾರೂ ಬರಬೇಡಿ’ ಎಂದು ದೊಡ್ಡದಾಗಿ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆ.
ಹೌದು, ಜೂನ್ 18ರ ಗುರುವಾರ ಬೆಳಗ್ಗೆ 9ಗಂಟೆಗೆ ಹೆಬ್ಬಾಳದ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನೆರವೇರಲಿದೆ. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಜನರನ್ನು ಒಂದೆಡೆ ಸೇರಿಸುವುದು ಅಪರಾಧ. ಅದನ್ನು ಗಮನದಲ್ಲಿಟ್ಟುಕೊಂಡು, ಆಮಂತ್ರಣ ಪತ್ರಿಕೆಯೊಂದನ್ನು ಸಿದ್ಧಪಡಿಸಿ, ಸರ್ಕಾರದ ನಿಯಮ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಕೋವಿಡ್ 19ನಿಂದ ದೂರವಿರುವುದು ನಮ್ಮೆಲ್ಲರ ಜವಾಬ್ದಾರಿ, ಆದ್ದರಿಂದ ಈ ಮುಹೂರ್ತ ಸಮಾರಂಭಕ್ಕೆ ನಿಮಗೆ ಆಹ್ವಾನವಿಲ್ಲ. ನೀವು ಇರುವಲ್ಲಿಯೇ ನಮ್ಮನ್ನು, ನಮ್ಮ ತಂಡವನ್ನು ಹರಿಸಿ, ಹಾರೈಸಿ’ ಎಂದು ಬೇಡಿಕೊಂಡಿದ್ದಾರೆ ನಿರ್ಮಾಪಕ ಎನ್ ಸಂದೇಶ್.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಜನ್ಮ ದಿನದ ಪ್ರಯುಕ್ತ, ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಕಳೆದ ವರ್ಷ ‘ಅಮರ್’ ಚಿತ್ರದ ಮೂಲಕ ಅಭಿಷೇಕ್ ಅಂಬರೀಷ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ನಿರ್ದೇಶಕ ನಾಗಶೇಖರ್, ‘ಶ್ರೀಕೃಷ್ಣ@ಜೀಮೇಲ್.ಕಾಮ್’ ಸಿನಿಮಾಗೂ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ. ‘ಅಮರ್’ ಸಿನಿಮಾ ನಿರ್ಮಾಣ ಮಾಡಿದ್ದ ಸಂದೇಶ್ ನಾಗರಾಜ್ ಈ ಚಿತ್ರಕ್ಕೂ ಬಂಡವಾಳ ಹೂಡಲಿದ್ದಾರೆ.
ಸತ್ಯ ಹೆಗಡೆ ಛಾಯಾಗ್ರಹಣ, ಜೆಸ್ಸಿ ಗಿಫ್ಟ್ ಸಂಗೀತ ನಿಭಾಯಿಸಲಿದ್ದು, ದೀಪು ಎಸ್ ಕುಮಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.