

ಸುಬ್ರಹ್ಮಣ್ಯ: ಹಿರಿಯರು ಹಾಕಿಕೊಟ್ಟ ತಳಹದಿಯಲ್ಲಿ ನಡೆದುಕೊಂಡು ಹೋದರೆ ಜೀವನ ಸಾರ್ಥಕವಾಗುತ್ತದೆ. ತ್ಯಾಗ, ಪರಿಶ್ರಮ, ನಿಷ್ಠೆ ಮತ್ತು ಭಯ-ಭಕ್ತಿಯ ಸಂಕೇತವಾಗಿ ಅಯ್ಯಪ್ಪ ವ್ರತವನ್ನು ಮಾಡುತ್ತೇವೆ. ಕಷ್ಟದ ಮೂಲಕ ಸುಖವನ್ನು ಕಾಣುವ ಶ್ರೇಷ್ಠ ಆಚರಣೆ ಇದಾಗಿದೆ. ಗುರುವಿನ ನೈಜ ಶ್ರೇಷ್ಠತೆ ಇಲ್ಲಿಂದ ಸಮಾಜಕ್ಕೆ ವಿಧಿತವಾಗುತ್ತದೆ ಎಂದು ಸುಬ್ರಹ್ಮಣ್ಯ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್ ಹೇಳಿದರು.
ಸುಬ್ರಹ್ಮಣ್ಯದ ಅಖಿಲ ಭಾರತ ಶ್ರೀ ಅಯ್ಯಪ್ಪ ಸೇವಾ ಸಂಘ ಆಶ್ರಯದಲ್ಲಿ ಅಯ್ಯಪ್ಪ ದೀಪೋತ್ಸವ ಸಮಿತಿಯ ಸಹಭಾಗಿತ್ವದಲ್ಲಿ ಸುಬ್ರಹ್ಮಣ್ಯದ ಸವಾರಿ ಮಂಟಪದಲ್ಲಿ ನಡೆದ 16ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಪ್ರಯುಕ್ತ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ನಿವೃತ್ತ ಮುಖಶಿಕ್ಷಕ ಕೆ.ಯಶವಂತ ರೈ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಾಧಕರಾದ ವರ್ಷಾ ಬೇಕಲ್ ಮತ್ತು ಅಕ್ಷಯ್ ನಾಯರ್ ಅವರನ್ನು ಗೌರವಿಸಲಾಯಿತು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ದೀಪೋತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರವೀಂದ್ರನ್ ವಹಿಸಿದ್ದರು. ಕುಕ್ಕೆಶ್ರೀ ಆಟೋ ಚಾಲಕ ಸಂಘದ ಅಧ್ಯಕ್ಷ ಮಹೇಶ್ ಗುಡ್ಡೆಮನೆ ಮುಖ್ಯ ಅತಿಥಿಗಳಾಗಿದ್ದರು. ಸುಬ್ರಹ್ಮಣ್ಯದ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಉಮೇಶ್ ಗುರುಸ್ವಾಮಿ, ದೀಪೋತ್ಸವ ಸಮಿತಿ ಕಾರ್ಯದರ್ಶಿ ಶೇಷಕುಮಾರ್ ಶೆಟ್ಟಿ, ಕೋಶಾಧಿಕಾರಿ ದೀಪಕ್ ನಂಬಿಯಾರ್, ಪೂರ್ವಾಧ್ಯಕ್ಷರಾದ ಡಾ.ರವಿ ಕಕ್ಕೆಪದವು, ವೆಂಕಟೇಶ್.ಎಚ್.ಎಲ್ ಇದ್ದರು.
ಮೆರವಣಿಗೆ
ದೀಪೋತ್ಸವ ಮೆರವಣಿಗೆ ಕಾಶಿಕಟ್ಟೆಯಾಗಿ, ದೇವಳದ ರಥಬೀದಿ ಮೂಲಕ ಸಾಗಿ ಸವಾರಿ ಮಂಟಪದಲ್ಲಿ ಸಮಾಪ್ತಿಯಾಯಿತು. ವಿದ್ಯಾರ್ಥಿಗಳಿಂದ ದೀಪ ಮೆರವಣಿಗೆ, ಸಿಂಗಾರಿ ಮೇಳ, ಕುಣಿತ ಭಜನೆ, ಆಕರ್ಷಕ ಸುಡುಮದ್ದು ಮೆರವಣಿಗೆಯ ಆಕರ್ಷಣೆಯಾಗಿತ್ತು. ದೀಪೋತ್ಸವದ ಪ್ರಯುಕ್ತ ಬೆಳಗ್ಗೆ ಗಣಪತಿ ಹೋಮ ನಡೆಯಿತು. ಮಧ್ಯಾಹ್ನ ಅನ್ನದಾನ ಸೇವೆ ನೆರವೇರಿತು.