ಅಶ್ಲೀಲ ಮೆಸೇಜ್​ ಆರೋಪ; ರಾಣಿ ವಿರುದ್ದ ಕೇಸ್​ ಹಾಕಲು ಡಿಂಗ್ರಿ ನಾಗರಾಜ್​ ತೀರ್ಮಾನ

Dingri - Rani 1
Published on

ಬೆಂಗಳೂರು: ಅಶ್ಲೀಲ ಮೆಸೇಜ್​ಗಳನ್ನು ಕಳುಹಿಸುತ್ತಾರೆ ಎಂಬ ಆರೋಪ ಸೇರಿದಂತೆ ತಮ್ಮ ಮೇಲೆ ಹಲವು ಆರೋಪಗಳನ್ನು ಮಾಡಿರುವ ನಟಿ ಮತ್ತು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಉಪಾಧ್ಯಕ್ಷೆ ರಾಣಿ ಅವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹಾಕುವುದಾಗಿ ಹಿರಿಯ ನಟ ಡಿಂಗ್ರಿ ನಾಗರಾಜ್​ ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್​ ಅವರು ಮಹಿಳಾ ಕಲಾವಿದರ ಜತೆಗೆ ಅಸಭ್ಯವಾಗಿ ವರ್ತಿಸುವುದರ ಜತೆಗೆ, ಅವಾಚ್ಯ ಶಬ್ದಗಳಿಂದ ಅವಮಾನಿಸುತ್ತಿದ್ದಾರೆ. ಜತೆಗೆ, ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ. ಸಂಘದಲ್ಲಿ ಶೀಘ್ರವೇ ಚುನಾವಣೆ ನಡೆಯಲಿದ್ದು, ಹೊಸ ಸದಸ್ಯರ ನೋಂದಣಿಯಲ್ಲಿ ಅಕ್ರಮ ಎಸಗಿದ್ದಾರೆ. ಅಕ್ರಮವಾಗಿ ಬೈಲಾ ತಿದ್ದುಪಡಿ ಮಾಡುವುದರ ಜತೆಗೆ, ಸಂಘ'ದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ರಾಣಿ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಡಿಂಗ್ರಿ ನಾಗರಾಜ್​, ತಾವು ಪೋಷಕ ಕಲಾವಿದರ ಸಂಘದ ಹಣ ದುರುಪಯೋಗ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ಅಶ್ಲೀಲ ವಿಡಿಯೋ ಕಳಿಸಿರುವುದು ಸುಳ್ಳು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, 'ಸಂಘದ ಆವರಣದಲ್ಲಿ ರಾಣಿ ವಯಕ್ತಿಕ ಗಲಾಟೆ ಶುರು ಮಾಡಿದರು. ಹಾಗಾಗಿ, ಅವರನ್ನು ಉಚ್ಚಾಟನೆ ಮಾಡಲಾಯಿತು. ಈಗ ನಾವು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಗೊತ್ತಾಗಿ, ಅದನ್ನು ವಿರೋಧಿಸುವುದಕ್ಕೆ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ಅಶ್ಲೀಲ ವಿಡಿಯೋ ಕಳಿಸಿರೋದು ಸುಳ್ಳು ಮಾಹಿತಿ. ಈ ರೀತಿಯ ಆರೋಪ ಮಾಡಿರುವುದಕ್ಕೆ ನಾವೇ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ' ಎಂದು ಡಿಂಗ್ರಿ ನಾಗರಾಜ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net