ಬೆಂಗಳೂರು: ಟೈಂ ಟ್ರಾವಲ್ ಅಥವಾ ಟೈಂ ಲೂಪ್ ಕುರಿತಾದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲೇ ಈಗೀಗ ಟ್ರೆಂಡ್ ಆಗುತ್ತಿದೆ. ಇತ್ತೀಚೆಗೆ ಇಂಥದ್ದೇ ಒಂದು ಕಾನ್ಸೆಪ್ಟ್ ಇರುವ ‘ಬನಾರಸ್’ ಚಿತ್ರ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಈಗ ಅಂಥದ್ದೇ ಶೈಲಿಯ ಇನ್ನೊಂದು ಚಿತ್ರ ಕನ್ನಡದಲ್ಲಿ ನಿರ್ಮಾಣವಾಗುವುದಕ್ಕೆ ಸಜ್ಜಾಗಿದೆ.
ಈ ಹಿಂದೆ ‘ಮಮ್ಮಿ’, ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಲೋಹಿತ್, ಈಗ ಪ್ರಜ್ವಲ್ ದೇವರಾಜ್ ಜತೆಗೆ ಹೊಸದೊಂದು ಚಿತ್ರ ಶುರು ಮಾಡಿದ್ದಾರೆ. ವಿಶೇಷವೆಂದರೆ, ಪ್ರಜ್ವಲ್ ಅಭಿನಯದಲ್ಲಿ ಲೋಹಿತ್ ಸದ್ಯ ‘ಮಾಫಿಯಾ’ ಎಂಬ ಚಿತ್ರ ಮಾಡುತ್ತಿದ್ದಾರೆ. ಅದು ಸಂಪೂರ್ಣವಾಗಿ, ಬಿಡುಗಡೆಯಾಗುವ ಮೊದಲೇ ಅವರ ಜತೆಗೆ ಇನ್ನೊಂದು ಚಿತ್ರ ಘೋಷಿಸಿದ್ದಾರೆ.
ಇದನ್ನೂ ಓದಿ: ಕೆಲ ನಟರು ನನ್ನೊಂದಿಗೆ ನಟಿಸಲು ಭಯಪಡುತ್ತಾರೆ! ಬಹುಭಾಷಾ ನಟ ಪ್ರಕಾಶ್ ರಾಜ್ ಕೊಟ್ಟ ಕಾರಣವಿದು
ಈ ಕುರಿತು ಮಾತನಾಡಿರುವ ಪ್ರಜ್ವಲ್, ‘ಲೋಹಿತ್ ಜತೆಗೆ ಈಗಷ್ಟೇ ‘ಮಾಫಿಯಾ’ ಚಿತ್ರವನ್ನು ಮುಗಿಸಿದ್ದೇನೆ. ಈ ಮಧ್ಯೆ, ಅವರು ಹೇಳಿದ ಒಂದು ಕಥೆ ಬಹಳ ಇಷ್ಟವಾಯ್ತು. ಅವರ ಕೆಲಸದ ಶೈಲಿಯನ್ನು ಹತ್ತಿರದಿಂದ ನೋಡಿರುವುದರಿಂದ, ಅವರ ನಿರ್ದೇಶನದಲ್ಲಿ ಇನ್ನೊಂದು ಸಿನಿಮಾದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.
‘ಮಾಫಿಯಾ’ ಸಿನಿಮಾದ ಚಿತ್ರೀಕರಣದ ವೇಳೆಯಲ್ಲೇ ಈ ಚಿತ್ರದ ಕುರಿತು ಪ್ರಜ್ವಲ್ ಜತೆಗೆ ಮಾತನಾಡಿದ್ದರಂತೆ ಲೋಹಿತ್. ‘ಕಥೆ ಕೇಳಿ ಖುಷಿಯಾಗಿಮ ನಾವೇ ಈ ಪ್ರಾಜೆಕ್ಟ್ ಮಾಡೋಣ ಎಂದು ಹೇಳಿದ್ದರು. ಅವರು ನಿರ್ದೇಶಕರ ನಟ. ಬಹಳ ಸಪೋರ್ಟಿವ್ ಆಗಿರುತ್ತಾರೆ. ಅವರ ಜತೆಗೆ ಅಂದುಕೊಂಡಂತೆಯೇ ಸಿನಿಮಾ ಔಟ್ ಪುಟ್ ತೆಗೆಯಬಹುದು’ ಎನ್ನುತ್ತಾರೆ ಲೋಹಿತ್.
ಅಂದಹಾಗೆ, ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಸದ್ಯ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮುಗಿದಿದ್ದು, ಡಿಸೆಂಬರ್ನಲ್ಲಿ ಚಿತ್ರದ ಕೆಲಸಗಳು ಆರಂಭವಾಗಲಿವೆ. ಇದೊಂದು ಹಾರಾರ್-ಥ್ರಿಲ್ಲರ್ ಶೈಲಿಯ ಟೈಂ ಲೂಪ್ ಚಿತ್ರವಾಗಿರಲಿದೆಯಂದೆ. ಸದ್ಯದಲ್ಲೇ ಸಿನಿಮಾದ ಹೆಸರೇನು ಎಂಬ ವಿಷಯ ಬಹಿರಂಗಗೊಳ್ಳಲಿದೆ. ಜತೆಗೆ ಪ್ರಜ್ವಲ್ ಜತೆಗೆ ಯಾರೆಲ್ಲ ನಟಿಸುತ್ತಾರೆ ಎಂಬ ಸುದ್ದಿ ಸಹ ಬೆಳಕಿಗೆ ಬರಲಿದೆ.
ಶಾನ್ವಿ ಎಂಟರ್ ಪ್ರೈಸಸ್ ಬ್ಯಾನರ್ನಡಿ ಶಾನ್ವಿ ಮತ್ತು ಅಚಿಂತ್ಯ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನೊಬಿನ್ ಪೌಲ್ ಅವರ ಸಂಗೀತ ಮತ್ತು ಜೆಬಿನ್ ಜೇಕಬ್ ಅವರ ಛಾಯಾಗ್ರಹಣ ಇರಲಿದೆ.