BJP ಸಖ್ಯ ಬೆಳೆಸಿದ ಕೂಡಲೇ ಎಚ್​ಡಿಕೆ ಮನಸ್ಸು ಇಷ್ಟು ಕಲುಷಿತವಾಯಿತೆ?: ದಿನೇಶ್​ ಗುಂಡೂರಾವ್​

Untitled design - 2023-10-22T165940.986
Published on

ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಏಕದಿನ ವಿಶ್ವಕಪ್​ ಪಂದ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖದ್ದಾಗಿ ಸ್ಟೇಡಿಯಂಗೆ ತೆರಳಿ ವೀಕ್ಷಿಸಿದರು. ಸದ್ಯ ಈ ಒಂದು ವಿಚಾರ ಇದೀಗ ವಿಪಕ್ಷಗಳಲ್ಲಿ ತೀವ್ರ ಚರ್ಚೆಯಾಗುತ್ತಿದ್ದು, ಜೆಡಿಎಸ್​ ನಾಯಕ ಎಚ್.​​ಡಿ. ಕುಮಾರಸ್ವಾಮಿ ಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ವಿದ್ಯುತ್ ಕ್ಷಾಮ ಮತ್ತು ಬರದಲ್ಲಿ ಜನರು ಬೆಯುತ್ತಿದ್ದರೆ ದಿನಪೂರ್ತಿ ಕೂತು ಕ್ರಿಕೆಟ್ ನೋಡುವಷ್ಟು ಶೋಕಿದಾರ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​ ಗುಂಡೂರಾವ್​ ಎಚ್​ಡಿಕೆ ವಿರುದ್ಧ ಟ್ವೀಟ್​ ಮುಖೇನ ತಿರುಗೇಟು ನೀಡಿದ್ದಾರೆ.

"ಬೆಂಗಳೂರಲ್ಲಿ ನಡೆದ ವಿಶ್ವಕಪ್‌ನ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ ವೀಕ್ಷಿಸಿದ ಮುಖ್ಯಮಂತ್ರಿಗಳನ್ನು ಕುಮಾರಸ್ವಾಮಿ ಟೀಕಿಸಿದ್ದಾರೆ. ಮ್ಯಾಚ್ ನೋಡಲು ಹೋದ ಸಿದ್ದರಾಮಯ್ಯರನ್ನು ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಲು ಹೋಗಿದ್ದಾರೆ ಎಂದಿದ್ದಾರೆ. ಇದೆಂಥಾ ಸಂಕುಚಿತ ಮನಸ್ಥಿತಿ, ಕ್ರಿಕೆಟ್ ವೀಕ್ಷಣೆಯಲ್ಲೂ ರಾಜಕೀಯ ಮಾಡುವ ಅಗತ್ಯವಿತ್ತೆ? ಏನಾಗಿದೆ ಎಚ್​ಡಿಕೆಯವರಿಗೆ?" ಎಂದು ಪ್ರಶ್ನಿಸಿದ್ದಾರೆ.

"ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಯೊಂದರ ಪಂದ್ಯ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಪಂದ್ಯವನ್ನು ಸಾವಿರಾರು ಜನ ಟಿಕೆಟ್ ಖರೀದಿಸಿ ವೀಕ್ಷಿಸಿದ್ದಾರೆ. ಹಾಗಾದರೆ ಎಚ್​.ಡಿ. ಕುಮಾರಸ್ವಾಮಿ ಅವರ ಪ್ರಕಾರ ಅವರೆಲ್ಲರೂ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಲು ಹೋಗಿದ್ದರೆ? ಬಿಜೆಪಿ ಸಖ್ಯ ಬೆಳೆಸಿದ ಕೂಡಲೇ ಎಚ್​ಡಿಕೆಯವರ ಮನಸ್ಸು ಇಷ್ಟು ಕಲುಷಿತವಾಯಿತೆ?" ಎಂದು ಟ್ವೀಟ್​ ಮಾಡಿ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net