ಶಿಥಿಲಗೊಂಡ ಕೋನಡ್ಕ ಸೇತುವೆ! : ಬಿರುಕು ಬಿಟ್ಟು ಅಪಾಯಕ್ಕೆ ಆಹ್ವಾನ : ಐದು ಗ್ರಾಮಗಳ ಸಂಪರ್ಕಕ್ಕೆ ಕುತ್ತು

New Project
Published on

ಶಶಿ ಕುತ್ಯಾಳ ಈಶ್ವರಮಂಗಲ

ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯ ಕೋನಡ್ಕ ಎಂಬಲ್ಲಿರುವ ರಸ್ತೆ ಸೇತುವೆಯೊಂದು ಶಿಥಿಲಾವಸ್ಥೆಗೆ ತಲುಪಿದ್ದು, ಈಗಾಗಲೇ ಬಿರುಕು ಬಿಟ್ಟಿರುವ ಈ ಸೇತುವೆ ಕುಸಿದು ಬಿದ್ದಲ್ಲಿ ಗ್ರಾಮೀಣ ಭಾಗದ 5 ಗ್ರಾಮಗಳಿಗೆ ಅತಿ ಹತ್ತಿರದ ಸಂಪರ್ಕದ ರಸ್ತೆ ಕೊಂಡಿ ಕಳಚಿ ಹೋಗುವ ಭೀತಿ ಎದುರಾಗಿದೆ.

ಬೆಟ್ಟಂಪಾಡಿ ಗ್ರಾಮದ ರೆಂಜ ಮಸೀದಿ ಬಳಿಯಿಂದಾಗಿ ಕೋನಡ್ಕ, ಇರ್ದೆ ಗ್ರಾಮದ ಅರಂತನಡ್ಕ, ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಮೂಲಕವಾಗಿ ಅರಿಯಡ್ಕ ಗ್ರಾಮದ ಶೇಖಮಲೆಯಲ್ಲಿ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ, ಬೆಟ್ಟಂಪಾಡಿ ಗ್ರಾಮದ ಕೋನಡ್ಕ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿರುವ ಸೇತುವೆ ಇದೆ. 3 ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಈ ಸೇತುವೆ ಕುಸಿಯುವ ಹಂತಕ್ಕೆ ತಲುಪಿರುವುದು ಈ ಗ್ರಾಮೀಣ ಭಾಗದ ಜನತೆಯ ಆತಂಕಕ್ಕೆ ಕಾರಣವಾಗಿದೆ.

30 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಕೋನಡ್ಕ ಸೇತುವೆಯ ಪಿಲ್ಲರ್‌ಗಳು ಶಿಥಿಲಾವಸ್ಥೆಗೆ ತಲುಪಿ ಬಲಹೀನಗೊಂಡಿವೆ. ಸೇತುವೆ ಅಡಿಭಾಗದ ಪಿಲ್ಲರ್‌ಗಳ ತಳ ಭಾಗದಲ್ಲಿನ ಕಾಂಕ್ರೀಟ್ ದುರ್ಬಲವಾಗಿ ಬಿರುಕುಬಿಟ್ಟಿದೆ. ಜಲ್ಲಿ ಕಲ್ಲುಗಳು, ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ. ಸೇತುವೆಗೆ ಆಧಾರವಾಗಿ ನದಿಯ ಎರಡು ಬದಿಯಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಯ ಕಲ್ಲುಗಳು ತಳಭಾಗದಲ್ಲಿ ಕುಸಿದಿದೆ. ಸೇತುವೆಯ ಕೆಳ ಭಾಗದಲ್ಲಿ ವೃತ್ತಾಕಾರದಲ್ಲಿ ಐದು ಪಿಲ್ಲರ್‌ಗಳಿದ್ದು, ಎಡಬಿಡದೆ ಮಳೆ ಸುರಿಯುವ ವೇಳೆ ಮರದ ದಿಮ್ಮಿಗಳು ಮಳೆನೀರಿನೊಂದಿಗೆ ಕೊಚ್ಚಿಕೊಂಡು ಬಂದು ಬಲಹೀನ ಸ್ಥಿತಿಯಲ್ಲಿರುವ ಪಿಲ್ಲರ್‌ಗಳಿಗೆ ಬಡಿದಲ್ಲಿ ಸೇತುವೆಗೆ ಇನ್ನಷ್ಟು ಹಾನಿಯಾಗುವ ಸಾಧ್ಯತೆ ಇದೆ.

ಬದಿಗೆ ಸರಿಸಿದರೆ ಅಪಾಯ ಖಚಿತ

ಕೋನಡ್ಕ ಭಾಗದಲ್ಲಿ ಹರಿದು ಹೋಗುತ್ತಿರುವ ಹೊಳೆಗೆ ಈ ಸೇತುವೆ ನಿರ್ಮಿಸಲಾಗಿದೆ. ಅಗಲ ಕಡಿಮೆ ಇರುವ ಕಿರಿದಾದ ಸೇತುವೆ ಇದಾಗಿದ್ದರೂ ಈ ಸೇತುವೆಗೆ ಎರಡು ಬದಿಗಳಲ್ಲಿ ತಡೆಗೋಡೆ ನಿರ್ಮಿಸಿಲ್ಲ. ಮಳೆಗಾಲದಲ್ಲಿ ಎಡಬಿಡದೆ ಮಳೆ ಸುರಿಯುವ ವೇಳೆ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ವಾಹನಗಳನ್ನು ಚಲಾಯಿಸಿಕೊಂಡು ಹೋಗುವ ವೇಳೆ ಎಚ್ಚರ ತಪ್ಪಿ ಬದಿಗೆ ಸರಿಸಿದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯರು.

ಕುಸಿದು ಬಿದ್ದಲ್ಲಿ ರಸ್ತೆ ಸಂಪರ್ಕ ಕಡಿತ

ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಬೆಟ್ಟಂಪಾಡಿ, ಒಳಮೊಗ್ರು, ಇರ್ದೆ, ಅರಿಯಡ್ಕ, ನಿಡ್ಪಳ್ಳಿ ಗ್ರಾಮಗಳ ವಿವಿಧ ಪ್ರದೇಶಗಳಿಗೆ ಸಂಪರ್ಕಿಸಲು ಅತಿ ಹತ್ತಿರದ ಸಂಪರ್ಕ ರಸ್ತೆಯಲ್ಲಿಯೇ ಕೋನಡ್ಕ ಸೇತುವೆ ಇದೆ. ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ಹಲವಾರು ಮಂದಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಉದ್ಯೋಗಿಗಳು ಸೇರಿದಂತೆ ನೂರಾರು ಮಂದಿ ಈ ರಸ್ತೆಯನ್ನು ಬಳಸಿಕೊಂಡು ವಿವಿಧ ಕಡೆಗಳಿಗೆ ಹೋಗುತ್ತಿದ್ದಾರೆ. ದಿನ ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಈ ರಸ್ತೆಯ ಸಂಪರ್ಕ ಕೊಂಡಿಯಾಗಿರುವ ಸೇತುವೆ ಕುಸಿದು ಬಿದ್ದಲ್ಲಿ ರಸ್ತೆ ಸಂಪರ್ಕವೇ ಕಡಿತಗೊಳ್ಳಲಿದೆ. ಈ ರಸ್ತೆಯನ್ನು ಆಶ್ರಯಿಸಿಕೊಂಡ ವಾಹನ ಸವಾರರು ಹತ್ತಾರು ಕಿ.ಮೀ. ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯತೆ ಎದುರಾಗಲಿದೆ.

ಪೈಪ್‌ಲೈನ್ ಕಾಮಗಾರಿಯಿಂದ ಹಾನಿ

ಕೋನಡ್ಕ ಸೇತುವೆ ಇರುವ ರಸ್ತೆ ಬದಿಯ ಮೂಲಕವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಅಳವಡಿಸಲಾಗಿದೆ. ಪೈಪ್‌ಲೈನ್ ಅಳವಡಿಸುವ ಕಾಮಗಾರಿ ವೇಳೆ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಜೆಸಿಬಿ ಮೂಲಕ ಮಣ್ಣು ಅಗೆಯಲಾಗಿದ್ದರೂ ಅದನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಸೇತುವೆಯ ಒಂದು ಭಾಗದ ಮಣ್ಣು ಮಳೆ ನೀರಿನೊಂದಿಗೆ ಕೊಚ್ಚಿ ಹೋಗಿದೆ. ಇದರಿಂದಾಗಿ ಸೇತುವೆಗೆ ತಾಗಿಕೊಂಡಿರುವ ಕಾಂಕ್ರೀಟ್ ರಸ್ತೆಯ ಸ್ಲಾೃಬ್‌ನ ಅಡಿಭಾಗದಲ್ಲಿ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿದೆ.

ಕೋನಡ್ಕ ಸೇತುವೆಯು ಈ ಭಾಗದ ಜನತೆಗೆ ಸಂಪರ್ಕ ಕೊಂಡಿಯಾಗಿದೆ. ಬಿರುಕು ಬಿಟ್ಟಿರುವ ಸೇತುವೆಯನ್ನು ಪಂಚಾಯಿತಿ ವತಿಯಿಂದ ಪರಿಶೀಲನೆ ಮಾಡಲಾಗಿದ್ದು, ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗುವುದು. ಮೊದು ಕುಂಞಿ ಕೋನಡ್ಕ ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಹೊಸ ಸೇತುವೆ ನಿರ್ಮಾಣ ಮಾಡುವ ಅನಿವಾರ್ಯತೆ ಇದೆ. ಈಗಾಗಲೇ ಹೊಸ ಸೇತುವೆ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರು ಅನುದಾನ ಒದಗಿಸುವ ಭರವಸೆ ನೀಡಿದ್ದು, ಹೊಸ ಸೇತುವೆಯ ಬೇಡಿಕೆ ಈಡೇರುವ ನಿರೀಕ್ಷೆ ಇದೆ. ನವೀನ್ ರೈ ಚೆಲ್ಯಡ್ಕ ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net