

ಕಾಸರಗೋಡು: ವಾರೆಂಟ್ ಆರೋಪಿಯೊಬ್ಬ ಪೊಲೀಸ್ ವಶದಿಂದ ಪರಾರಿಯಾಗಿದ್ದು, ಈತನಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಹೊಸಬೆಟ್ಟು ಸಲ್ಮಾ ಮಂಜಿಲ್ ನಿವಾಸಿ ಸಿದ್ದಿಕ್ ಸಾರಿಕ್ ಫರ್ಹಾನ್(29) ಪರಾರಿಯಾಗಿದ್ದಾನೆ. 2019ರಲ್ಲಿ ಮಂಜೇಶ್ವರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಈತನ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು. ಈ ಮಧ್ಯೆ ಆರೋಪಿಯನ್ನು ಭಾನುವಾರ ಸಂಜೆ ವಶಕ್ಕೆ ತೆಗೆದುಕೊಂಡು ಮಂಜೇಶ್ವರ ಠಾಣೆಯಲ್ಲಿ ಪೊಲೀಸರ ನಿಗಾದಲ್ಲಿಸಿದ್ದರು. ಈ ಸಂದರ್ಭ ಕುಡಿಯಲು ನೀರು ಕೇಳಿದ್ದು, ನೀರು ತರಲು ಒಳ ಹೋಗುತ್ತಿದ್ದಂತೆ ಸೋಮವಾರ ನಸುಕಿಗೆ ಠಾಣೆಯಿಂದ ಪರಾರಿಯಾಗಿದ್ದಾನೆ. ಆರೋಪಿಯೊಬ್ಬ ಪರಾರಿಯಾಗಲು ಅವಕಾಶ ಕಲ್ಪಿಸಿದ ಪೊಲೀಸರ ನಿರ್ಲಕ್ಷೃ ಧೋರಣೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.