ಪಶುವೈದ್ಯಕೀಯ ಕೇಂದ್ರದಲ್ಲಿ ಡಿಜಿಟಲ್ ಕ್ಷ-ಕಿರಣ ಘಟಕ ಉದ್ಘಾಟನೆ

Ksd_veterinary
Published on

ಕಾಸರಗೋಡು: ಜಿಲ್ಲಾ ಪಂಚಾಯಿತಿಯ ಪಶುವೈದ್ಯಕೀಯ ಕೇಂದ್ರದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಕ್ಷ-ಕಿರಣ ಘಟಕವನ್ನು ಪಶುಸಂಗೋಪನಾ ಖಾತೆ ಸಚಿವೆ ಜೆ.ಚಿಂಚುರಾಣಿ ಆನ್‌ಲೈನ್ ಮೂಲಕ ಉದ್ಘಾಟಿಸಿದರು.

ಹೈನುಗಾರರ ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ರಾಜ್ಯ ಸರ್ಕಾರದ 100 ದಿನಗಳ ಕ್ರಿಯಾ ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಜಿಲ್ಲಾ ಪಂಚಾಯಿತಿಯ 2023-24ನೇ ಸಾಲಿನ ಸಾರ್ವಜನಿಕ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಚಿವೆ ತಿಳಿಸಿದರು.

ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಎಕ್ಸ್ ರೇ ಯಂತ್ರದ ಸ್ವಿಚ್ ಆನ್ ಮಾಡಿದರು. ಹಾಲಿನ ಉತ್ಪಾದನೆಯ ಜತೆಗೆ ಹಾಲಿನಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಸಾಧ್ಯವಿದ್ದು, ಇದಕ್ಕಾಗಿ ಕೃಷಿಕರು ಮುಂದಾಗಬೇಕು ಎಂದು ತಿಳಿಸಿದರು.

ಪ್ರಕೃತಿ ವಿಕೋಪ ಮತ್ತು ಅತಿಯಾದ ಬಿಸಿಲಿನಿಂದಾಗಿ ಜಾನುವಾರುಗಳನ್ನು ಕಳೆದುಕೊಂಡ 118 ಹೈನುಗಾರರಿಗೆ ಸುಮಾರು 28 ಲಕ್ಷ ರೂ. ಪರಿಹಾರಧನ ವಿತರಿಸಲಾಯಿತು. ಜಿಲ್ಲಾ ಮೃಗ ಸಂರಕ್ಷಣಾಧಿಕಾರಿ ಡಾ.ಪಿ.ಕೆ.ಮನೋಜ್ ಕುಮಾರ್ ವರದಿ ಮಂಡಿಸಿದರು. ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೀತಾಕೃಷ್ಣನ್, ಎಸ್.ಎನ್.ಸರಿತಾ, ಎಂ.ಮನು, ನಗರಸಭಾ ಕೌನ್ಸಿಲರ್ ಪಿ.ರಮೇಶ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಪಿ.ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net