ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಗ್ಯಾರಂಟಿ

chalavadi narayanaswamy
Published on

ಕೋಲಾರ: ಸಿಎಂ ಸಿದ್ದರಾಮಯ್ಯಗೆ ಪ್ರಾಸಿಕ್ಯೂಷನ್ ವಿಚಾರವಾಗಿ ನ್ಯಾಯಾಲಯ ರಿಲೀಫ್ ನೀಡಿರಬಹುದು, ಆದರೆ ನಾವು ಕೊಡುವುದಿಲ್ಲ. ಆ.29ರ ನಂತರ ಅವರು ಸಂಕಷ್ಟಕ್ಕೆ ಸಿಲುಕುವುದು ಖಚಿತ ಎಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರಿಗೆ ಕಾಂಗ್ರೆಸ್‌ನವರು ಅಗೌರವ ತೋರುತ್ತಿದ್ದಾರೆ. ತಪ್ಪನ್ನು ಕಂಡುಹಿಡಿದರೆ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದರು.
ಕಾಂಗ್ರೆಸ್ ಹೈಕಮಾಂಡ್‌ಗೆ ಎಟಿಎಂ ಸರ್ಕಾರ ಇರುವುದು ಕರ್ನಾಟಕದಲ್ಲಿ ಮಾತ್ರ. ಇಡೀ ದೇಶವನ್ನು ಸಾಕಬೇಕಿದೆ. ಕರ್ನಾಟಕದ ಹಣದಲ್ಲಿ ದೇಶವನ್ನು ಕಟ್ಟಬೇಕಿದೆ. ಶೂನ್ಯ ಭ್ರಷ್ಟಾಚಾರದ ಆಡಳಿತ ಎಂದು ಹೇಳಿದ್ದ ರಾಹುಲ್ ಗಾಂಧಿ ಈಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯಗೆ ಪ್ರ‍್ರೋತ್ಸಾಹ ಸೂಚಿಸಿರುವ ಅವರು, ಸಹಾಯ ಮಾಡುವಂತೆ ಶಾಸಕರಿಗೂ ಸೂಚಿಸಿದ್ದಾರೆ. ಇದೆಲ್ಲವೂ ಒಟ್ಟಾರೆ ಭ್ರಷ್ಟಾಚಾರವೇ ಆಗಿದೆ. ಮುಡಾ ಹಗರಣದಂತೆಯೇ ಪ್ರಿಯಾಂಕ್ ಖರ್ಗೆ ಅವರೂ ಹಗರಣ ನಡೆಸಿದ್ದು, ಆ ಬಗ್ಗೆಯೂ ತನಿಖೆಗೆ ಆಗ್ರಹಿಸುತ್ತೇವೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ತನಿಖೆಗೆ ಅನುಮತಿ ಕೊಡಬೇಡಿ ಎಂದು ನಾವು ಹೇಳುತ್ತಿಲ್ಲ. ತಪ್ಪು ಮಾಡಿದ್ದರೆ ಬಿಜೆಪಿಯವರ ಮೇಲೆಯೂ ತನಿಖೆ ಮಾಡಲಿ. ಆದರೆ, 187 ಕೋಟಿ ರೂ. ದುರುಪಯೋಗದ ವಿಚಾರವಾಗಿ ಮಾತನಾಡಿದ್ದ ಸಿದ್ದರಾಮಯ್ಯ ಅದು, ಕೇವಲ ಕೋಟಿ ಎಂದರೆ ಇನ್ನೇನು ಮಾಡಬೇಕು ಎಂದರು. ರಾಜ್ಯ ಸರ್ಕಾರ ಬೀಳುತ್ತದೆ ಎನ್ನುವುದು ಕಾಂಗ್ರೆಸ್ಸಿಗರಿಗೆ ಗ್ಯಾರಂಟಿಯಾಗಿದೆ. ಹೀಗಾಗಿ ಶಾಸಕರೇ ತಮ್ಮ ದರವನ್ನು ನಿಗದಿಪಡಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಬಿಜೆಪಿಯವರು ಕಾಂಗ್ರೆಸ್‌ನ ತಲಾ ಒಬ್ಬ ಶಾಸಕರಿಗೆ 50 ಕೋಟಿ ಕೊಡುತ್ತಾರೆ ಎಂದು ಹೇಳಿಕೊಂಡಿದ್ದರು, ಈಗ 100 ಕೋಟಿ ರೂ.ಗೆ ತಲುಪಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿಎಂ ಗಾದಿಗೇರಲು ಪೈಪೋಟಿ
ಸಿದ್ದರಾಮಯ್ಯ ಇಳಿದ ತಕ್ಷಣ ಸಿಎಂ ಯಾರಾಗುತ್ತಾರೆ ಎನ್ನುವುದಕ್ಕಿಂತಲೂ ಅವರ ಪಕ್ಷ ಅಽಕಾರದಲ್ಲಿ ಇರುತ್ತದೆಯೇ ಎನ್ನುವುದನ್ನು ಮೊದಲು ಯೋಚಿಸಬೇಕಿದೆ. ಸದ್ಯ 136 ಶಾಸಕರು ಇರುವುದೇ ಅವರಿಗೆ ದೊಡ್ಡ ಸಮಸ್ಯೆ. ಮುಖ್ಯಮಂತ್ರಿ ಆಗಬೇಕೆನ್ನುವವರು ಈಗಾಗಲೇ ಒಂದು ಡಜನ್ ಮಂದಿ ಇದ್ದಾರೆ. ಒಬ್ಬರನ್ನೇ ಸಿಎಂ ಮಾಡಲು ಸಾಧ್ಯ. ಈಗಾಗಲೇ ಕೆಲವರು ಬಟ್ಟೆ ಹೊಲಿಸಿಕೊಂಡಿದ್ದಾರೆ, ಮನೆಗಳಿಗೆ ಸುಣ್ಣ ಬಣ್ಣ ಬಳಿಸುತ್ತಿದ್ದಾರೆ, ಹೈಕಮಾಂಡ್ ಬಳಿ ಕೆಲವರು ಇದ್ದಾರೆ, ರಾಜ್ಯದಲ್ಲಿ ಕೆಲವರು ಇದ್ದಾರೆ, ಸಿದ್ದರಾಮಯ್ಯ ಬದಲಿಗೆ ಯಾರನ್ನು ಮಾಡಬೇಕೆಂಬ ಚಿಂತನೆಯಲ್ಲೂ ಕೈ ಹೈಕಮಾಂಡ್ ಇದೆ ಎಂದು ಹೇಳಿದರು.

  • ತಪ್ಪಿತಸ್ಥರಿಗೆ ಸರ್ಕಾರದ ಶ್ರೀರಕ್ಷೆ
    ಇತ್ತೀಚೆಗೆ ಅತ್ಯಾಚಾರ, ಕೊಲೆ, ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಈ ಸರ್ಕಾರ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾರಣ ಅವರು ಲೂಟಿ ಮಾಡಿರುವುದಕ್ಕೆ ತೇಪೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾನೂನು ಹದಗೆಟ್ಟಿದೆ, ಅಽಕಾರಿಗಳು ನಿಯಂತ್ರಣ ತಪ್ಪಿದ್ದಾರೆ. ಕಾರಣ ಸರ್ಕಾರವು ಅಧಿಕಾರಿಗಳ ಬಳಿ ಕೈ ಚಾಚಿದೆ ಎಂದು ಪೊಲೀಸ್ ಅಧಿಕಾರಿ ಪರುಶುರಾಮ್ ಛಲವಾದಿ ಪ್ರಕರಣ ಉದಾಹರಿಸಿದರು. ತಪ್ಪಿತಸ್ಥರಿಗೆ ಸರ್ಕಾರವೇ ಶ್ರೀರಕ್ಷೆಯಾಗಿದ್ದು, ಭ್ರಷ್ಟಾಚಾರ ತುಂಬಿದೆ ಎಂದು ಆರೋಪಿಸಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ಎಸ್.ಬಿ.ಮುನಿವೆಂಕಟಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net