

ಕೋಲಾರ: ಮುಖ್ಯಮಂತ್ರಿ ವಿಚಾರದಲ್ಲಿ ಜಾತಿ ನೋಡಬಾರದು. ಸಿಎಂ ಆದವರು ಜಾತಿವಾದಿ ಆಗಿರಬಾರದು. ಸಿದ್ದರಾಮಯ್ಯ ಭ್ರಷ್ಷಟರಲ್ಲ. ಆದರೆ, ಸರ್ಕಾರ ಉರುಳಿಸಲು ಬಿಜೆಪಿ ಹಾಗೂ ಜೆಡಿಎಸ್ ಮುಡಾ ವಿಚಾರ ಮುಂದಿಟ್ಟುಕೊಂಡು ಷಡ್ಯಂತ್ರ ರೂಪಿಸುತ್ತಿವೆ ಎಂದು ಬಾರ್ಕೂರು ಸಂಸ್ಥಾನ ಮಠದ ಶ್ರೀ ಸಂತೋಷ ಗುರೂಜಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದುಳಿದ ವರ್ಗದ ಕೆಲ ಮಠಾಧಿಶರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ. ನಾವೂ ಅವರ ಬೆಂಬಲಕ್ಕೆ ಇದ್ದೇವೆ. ಹಿಂದುಳಿದ ವರ್ಗದವರು ಮಾತ್ರವಲ್ಲ. ಲಿಂಗಾಯತ ಮಠದ ಎಲ್ಲ ಸ್ವಾಮೀಜಿಗಳೂ ಸಿದ್ದರಾಮಯ್ಯ ಜತೆ ನಿಲ್ಲಬೇಕಿದೆ ಎಂದರು.
ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮನರ ಜಮೀನಿಗೆ ಬದಲಾಗಿ ಬೇರೆ ನಿವೇಶನ ಕೊಡಲಾಗಿದೆ ಅಷ್ಟೆ. ಹಿಂದಿನ ಮುಖ್ಯಮಂತ್ರಿಗಳು ಎಷ್ಟು ಹಗರಣ ಮಾಡಿದ್ದಾರೆ?, ಎಷ್ಟು ದುಡ್ಡು ಮಾಡಿದ್ದಾರೆ ಎಂಬುದೆಲ್ಲಾ ಗೊತ್ತಿದೆ. ಕೆಲ ರಾಜಕಾರಣಿಗಳಿಗೆ ಸಾವಿರಾರು ಕೋಟಿ ರೂ. ಹಣ ಎಲ್ಲಿಂದ ಬಂತು? ಇಂಥವರು ಸಭೆ ಮಾಡುತ್ತಾರೆ ಎಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲು ಕರ್ನಾಟಕದ ಜನ ದಡ್ಡರಲ್ಲ ಎಂದರು.
೨೦೨೫ರ ಆಗಸ್ಟ್ನಲ್ಲಿ ಪ್ರಧಾನಿ ಮೋದಿ ಅವರಿಗೂ ಕಂಟಕವಿದೆ. 2025ರ ಜುಲೈ, ಆಗಸ್ಟ್ನಲ್ಲಿ ಸಿದ್ದರಾಮಯ್ಯಗೆ ಕಂಟಕ ಎದುರಾಗಲಿದೆ. ಅಲ್ಲಿಯವರೆಗೆ ಅವರನ್ನು ಇಳಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ, ಡಿ.ಕೆ.ಶಿವಕುಮಾರ್ಗೆ ಮುಖ್ಯಮಂತ್ರಿ ಆಗುವ ಭಾಗ್ಯವಿದೆ ಎಂಬುದಾಗಿ ನಾನು ಹೇಳಲ್ಲ. ಅವರಿಗೆ ನಾಲ್ಕಾರು ತೊಡಕುಗಳು ಇವೆ. ಮುಖ್ಯಮಂತ್ರಿ ಆಕಾಂಕ್ಷಿಗಳು ಹಲವು ಮಂದಿ ಇದ್ದಾರೆ ಎಂದು ಹೇಳಿದರು.