ಬಿಯರ್​ ಬಾಟಲ್​ನಿಂದ ಕೈ ಕೊಯ್ದುಕೊಂಡು ಪ್ರಭಾಸ್​ಗೆ ಜೈಕಾರ: ಅಭಿಮಾನಿಯ ಅತಿರೇಕದ ವರ್ತನೆ, ವಿಡಿಯೋ ವೈರಲ್​

Prabhas Fan
Published on

ಹೈದರಾಬಾದ್​: ಇಂದಿನಿಂದ ದೇಶಾದ್ಯಂತ ನಟ ಪ್ರಭಾಸ್​ ನಟನೆಯ ಆದಿಪುರುಷ್​ ಸಿನಿಮಾ ಬಿಡುಗಡೆಯಾಗಿದೆ. ನೆಚ್ಚಿನ ನಟನ ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಪ್ರತಿ ಬಾರಿ ಸ್ಟಾರ್​ ನಟರ ಸಿನಿಮಾಗಳು ಬಿಡುಗಡೆಯಾದಾಗ ಅವರ ಅಭಿಮಾನಿಗಳು ಅತಿರೇಕದಿಂದ ವರ್ತಿಸುವುದು ಸಾಮಾನ್ಯ. ಇದೀಗ ಆದಿಪುರುಷ್​ ಸಿನಿಮಾ ವಿಚಾರದಲ್ಲೂ ಇದೇ ನಡೆದಿದೆ. ಆದಿಪುರುಷ್​ ಬಿಡುಗಡೆಯಾಗಿರುವ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಕಟೌಟ್​ಗಳನ್ನಿಟ್ಟು ಹಾರ-ತುರಾಯಿ ಹಾಕಿ ಸಂಭ್ರಮಿಸುತ್ತಿದ್ದಾರೆ.

ಇದರ ನಡುವೆ ಅಭಿಮಾನಿಯೊಬ್ಬನ ಹುಚ್ಚು ಅಭಿಮಾನ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಹೂವಿನ ಹಾರ ಹಾಕಿ, ಹಾಲಾಭಿಷೇಕ ಮಾಡಿ ಜೈಕಾರ ಕೂಗುವುದನ್ನು ನೋಡಿದ್ದೇವೆ. ಇಷ್ಟೇ ಅಲ್ಲದೆ, ಪ್ರಾಣಿಗಳನ್ನು ಬಲಿ ಕೊಡುವ ಬಗ್ಗೆಯೂ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಪ್ರಭಾಸ್​ ಅಭಿಮಾನಿ ಬಿಯರ್​ ಬಾಟಲ್​ನಿಂದ ತನ್ನ ಕೈ ಕೊಯ್ದುಕೊಂಡು ಪ್ರಭಾಸ್​ಗೆ ಜೈಕಾರ ಕೂಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹುಚ್ಚು ಅಭಿಮಾನಿಗೆ ಕೆಲ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಪ್ರಭಾಸ್​ ಅಭಿಮಾನಿ ಚಿತ್ರಮಂದಿರದಲ್ಲಿ ಪ್ರಭಾಸ್​ ಪೋಸ್ಟರ್​ ಮುಂದೆ ನಿಂತು ಬಿಯರ್​ ಬಾಟಲ್​ನಿಂದ ತನ್ನ ಕೈ ಕೊಯ್ದುಕೊಂಡು ರಕ್ತವನ್ನು ಪ್ರಭಾಸ್​ ಪೋಸ್ಟರ್​ನಲ್ಲಿ ಹಣೆಗೆ ತಿಲಕವನ್ನಾಗಿ ಇಟ್ಟು ಜೈಕಾರ ಕೂಗುತ್ತಾನೆ. ಬಾಟಲ್​ ಅನ್ನು ಎಸೆಯದೆ ಸ್ಥಳದಲ್ಲೇ ಕುಣಿದು ಕುಪ್ಪಳಿಸುತ್ತಾ ಅನೇಕ ಬಾರಿ ಬಾಟಲ್​ನಿಂದ ಅಭಿಮಾನಿ ಕೈ ಕೊಯ್ದುಕೊಳ್ಳುತ್ತಾನೆ.

ಅಭಿಮಾನಿ ಕೈ ಕೊಯ್ದುಕೊಳ್ಳುತ್ತಿದ್ದರೂ ಅಲ್ಲಿದ್ದ ಇತರರು ಆತನನ್ನು ಸುಮ್ಮನಿರಿಸುವ ಬದಲು ವಿಡಿಯೋ ಮಾಡಿಕೊಂಡು ಎಂಜಾಯ್​ ಮಾಡುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪ್ರಭಾಸ್​ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿನಿಮಾ ನೋಡಿದ್ರಾ? ಎಂಜಾಯ್​ ಮಾಡಿದ್ರಾ? ಇಷ್ಟರಲ್ಲೇ ಇರಬೇಕು ನಿಮ್ಮ ಅಭಿಮಾನ. ಅದನ್ನು ಬಿಟ್ಟು ಈ ರೀತಿ ಕೈ ಕೊಯ್ದುಕೊಳ್ಳುವುದೆಂದರೆ ಏನರ್ಥ? ನೀವೆಂಥಾ ಹುಚ್ಚು ಅಭಿಮಾನಿ. ಅಲ್ಲಿದ್ದವರು ಆತನ ಕೆನ್ನಗೆ ಎರಡು ಬಾರಿಸುವುದನ್ನು ಬಿಟ್ಟು ನೋಡುತ್ತಾ ನಿಂತಿದ್ದು ನಿಜಕ್ಕೂ ನಾಚಿಕೆಗೇಡು ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಆದಿಪುರುಷ್​ ಸಿನಿಮಾ ಇಂದಿನಿಂದ ಬಿಡಗಡೆಯಾಗಿದೆ. ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ವಿಎಫ್​ಎಕ್ಸ್​ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಟೀಕೆಗಳ ನಡುವೆಯೂ ಆದಿಪುರುಷ್​ ಸಿನಿಮಾ ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಆದಿಪುರುಷ್​ ಸಿನಿಮಾ ರಾಮಾಯಣ ಆಧಾರಿತ ಸಿನಿಮಾ ಆಗಿದೆ. ಪ್ರಭಾಸ್​ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಕೃತಿ ಸನೋನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಸೈಫ್​ ಅಲಿ ಖಾನ್​ ರಾವಣ ಪಾತ್ರದಲ್ಲಿ ಅಬ್ಬರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net