ಹುದ್ದೆ ಬಯಸಿಲ್ಲ, ರಾಜಕೀಯ ಕಲಹಕ್ಕೂ ಅವಕಾಶವಿಲ್ಲ; ತಿಂಗಳ ಬಳಿಕ ಜೈಪುರ್​ಗೆ ಮರಳಿದ ಸಚಿನ್​ ಪೈಲಟ್​ ಹೇಳಿಕೆ

SACHINPILOT1
Published on

ಜೈಪುರ್​: ಕಾಂಗ್ರೆಸ್​ ವರಿಷ್ಠರೊಂದಿಗೆ ಮುನಿಸಿಕೊಂಡು, ಸಿಎಂ ಅಶೋಕ್​ ಗೆಹ್ಲೋಟ್​ ಜತೆ ಹಗೆತನ ಸಾಧಿಸಿಕೊಂಡು ಕಳೆದ ಒಂದು ತಿಂಗಳಿನಿಂದ ಪಕ್ಷದಿಂದ ದೂರವಿದ್ದ ಸಚಿನ್​ ಪೈಲಟ್​ ಮಂಗಳವಾರ ರಾತ್ರಿ ಜೈಪುರ್​ಗೆ ಮರಳಿದರು. ಅವರ ಬೆಂಬಲಿಗರು ಭರ್ಜರಿ ಸ್ವಾಗತ ನೀಡಿ ಬರಮಾಡಿಕೊಂಡರು.

ರಾಜಸ್ಥಾನದ ಡಿಸಿಎಂ ಹುದ್ದೆ ಹಾಗೂ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸಚಿನ್​ ಪೈಲಟ್​ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಯಾವುದೇ ಆಕಾಂಕ್ಷಿಯಲ್ಲ ಹಾಗೂ ಯಾವುದೇ ರಾಜಕೀಯ ಕಲಹಕ್ಕೂ ಅವಕಾಶವಿಲ್ಲ ಎಂದು ಹೇಳಿದರು.

ದೆಹಲಿಯಿಂದ ಜೈಪುರ್​ನಲ್ಲಿರುವ ತಮ್ಮ ನಿವಾಸಕ್ಕೆ ಮರಳಿದ ಪೈಲಟ್​ ಜತೆಗೆ ಬಂಡಾಯ ಶಾಸಕರು ಹಾಜರಿದ್ದರು. ಜಿಲ್ಲಾ ಕಾಂಗ್ರೆಸ್​ ಕಚೇರಿ ಎದುರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಸಚಿನ್​ ಪೈಲಟ್​ ಜೈಪುರ್​ಗೆ ಬರುವ ಮುನ್ನವೇ ಸಿಎಂ ಅಶೋಕ್​ ಗೆಹ್ಲೋಟ್​ ಜೈಸಲ್ಮೇರ್​ಗೆ ಪ್ರಯಾಣಿಸಿದರು. ಆಗಸ್ಟ್​ 14ರಂದು ಅಧಿವೇಶನ ಆರಂಭವಾಗಲಿರುವ ಹಿನ್ನೆಲೆ ಕಾಂಗ್ರೆಸ್​ ಶಾಸಕರನ್ನು ಇರಿಸಲಾಗಿರುವ ರೆಸಾರ್ಟ್​ನಲ್ಲಿಯೇ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ಪಕ್ಷದ ಶಾಸಕರ ಮನಸ್ಸನ್ನು ಮತ್ತೆ ಗೆಲ್ಲುವ ಸವಾಲು ಹಾಗೂ ಹೊಣೆಗಾರಿಕೆ ಪೈಲಟ್​ದಾಗಿದೆ ಎಂದು ಪ್ರತಿಕ್ರಿಯಿಸಿದರು.

ಪಕ್ಷದಲ್ಲಿ ಶಾಂತಿ ಹಾಗೂ ಭಾತೃತ್ವ ನೆಲೆಸಿರಬೇಕು. ಮೂರು ಸದಸ್ಯರ ಸಮಿತಿ ಕೈಗೊಳ್ಳುವ ನಿರ್ಣಯಗಳನ್ನು ಆಧರಿಸಿಯೇ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಗೆಹ್ಲೋಟ್​ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net