ಇದೇನು IPL ಅಂದ್ಕೊಂಡಿದ್ದೀಯಾ? ಕೊಹ್ಲಿಯನ್ನು ಕೊಂಡಾಡಿ ರೋಹಿತ್​ಗೆ ಟಾಂಗ್​ ಕೊಟ್ಟ ನಟಿ ಶ್ರೀರೆಡ್ಡಿ!

Srireddy
Published on

ಹೈದರಾಬಾದ್​: ಟಾಲಿವುಡ್​ ನಟಿ ಶ್ರೀರೆಡ್ಡಿ, ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದವರು. ಕಾಸ್ಟಿಂಗ್​ ಕೌಚ್​ ಬಗ್ಗೆ ನೇರವಾಗಿ ಮಾತನಾಡುವ ಮೂಲಕ ಕಾಲಿವುಡ್​ನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಅಷ್ಟೇ ಅಲ್ಲದೆ, ಅರೆಬೆತ್ತಲೆಯಾಗಿ ಪ್ರತಿಭಟಿಸುವ ಮೂಲಕ ಹೆಚ್ಚು ಚರ್ಚೆಗೀಡಾದ ಶ್ರೀರೆಡ್ಡಿ ಇದೀಗ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾ ವಿರುದ್ಧ ಮಾತನಾಡುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಟೀಮ್​ ಇಂಡಿಯಾ ಕಳಪೆ ಪ್ರದರ್ಶನ

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಶ್ರೀರೆಡ್ಡಿ ವಿವಾದಾತ್ಮಕ ಕಾಮೆಂಟ್​ಗಳನ್ನು ಮಾಡುತ್ತಲೇ ಇರುತ್ತಾರೆ. ರಾಜಕೀಯ, ಸಿನಿಮಾ ಮತ್ತು ಕ್ರೀಡೆ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಶ್ರೀರೆಡ್ಡಿ ಟ್ವೀಟ್​ ಮಾಡುತ್ತಲೇ ಇರುತ್ತಾರೆ. ಇದೀಗ ರೋಹಿತ್​ ಶರ್ಮ ವಿರುದ್ಧ ಖಾರವಾಗಿ ಟ್ವೀಟ್​ ಮಾಡಿದ್ದಾರೆ. ಲಂಡನ್​ನ ಕೆನ್ನಿಂಗ್ಟನ್​ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಫ್​ನ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಡಿಯಾ ಕಳಪೆ ಪ್ರದರ್ಶನ ನೀಡಿದೆ.

ಟಾಸ್​ ಗೆದ್ದ ರೋಹಿತ್​ ಶರ್ಮ ಬೌಲಿಂಗ್​ ಆಯ್ದುಕೊಂಡರು. ಆದರೆ, ಆಸಿಸ್​ ಪಡೆಯನ್ನು ಕಟ್ಟಿಹಾಕುವಲ್ಲಿ ಟೀಮ್​ ಇಂಡಿಯಾ ಬೌಲರ್​ಗಳು ವಿಫಲವಾಗಿದ್ದಾರೆ. ಕೇವಲ 76 ರನ್​ಗೆ ಮೂರು ವಿಕೆಟ್​ ಕಬಳಿಸಿದರೂ ಆನಂತರ ಕ್ರೀಸ್​ನಲ್ಲಿ ಭದ್ರವಾಗಿ ನೆಲೆಯೂರಿದ ಟ್ರಾವಿಸ್​ ಮತ್ತು ಸ್ಟೀವ್​ ಸ್ಮಿತ್​ ಉತ್ತಮ ಜತೆಯಾಟವಾಡಿದರು. ಟ್ರಾವಿಸ್​ ಹೆಡ್​ 146 ರನ್​ ಗಳಿಸಿ ಅಜೇಯರಾಗಿ ಉಳಿದಿದ್ದರೆ, ಸ್ಮಿತ್​ 95 ರನ್​ ಗಳಿಸಿ ಶತಕದ ಅಂಚಿನಲ್ಲಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಆಸಿಸ್​ ಪಡೆ 3 ವಿಕೆಟ್​ ನಷ್ಟಕ್ಕೆ 327 ರನ್​ ಕಲೆಹಾಕಿದೆ.

ಬೌಲಿಂಗ್​ ಆಯ್ಕೆಯ ಅಚ್ಚರಿ

ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ರೋಹಿತ್​ ಶರ್ಮ ನಡೆಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಓವಲ್​ ಮೈದಾನದ ಪರಿಸ್ಥಿತಿಯ ಪ್ರಕಾರ ಯಾರಾದರೂ ಟಾಸ್​ ಗೆದ್ದರೆ ಮೊದಲು ಬ್ಯಾಟಿಂಗ್​ ಆಯ್ದುಕೊಳ್ಳುತ್ತಾರೆ ಎಂದು ಅನೇಕ ಹಿರಿಯ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ರೋಹಿತ್​ ಶರ್ಮ ಬೌಲಿಂಗ್​ ಆಯ್ದುಕೊಂಡಿದ್ದು ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರೆಡ್ಡಿ ಅವರು ಟ್ವೀಟ್​ ಮೂಲಕ ರೋಹಿತ್​ ಶರ್ಮರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿರಾಟ್​ ಕೊಹ್ಲಿಯನ್ನು ಹೊಗಳಿ ರೋಹಿತ್​ರನ್ನು ತೆಗಳಿರುವುದರಿಂದ ಶ್ರೀರೆಡ್ಡಿ ವಿರುದ್ಧ ರೋಹಿತ್​ ಅಭಿಮಾನಿಗಳು ಗರಂ ಆಗಿದ್ದಾರೆ.

ಕೊಹ್ಲಿ ನಗುತ್ತಿರುತ್ತಾರೆ

ಇದು ಐಪಿಎಲ್​ ಎಂದು ಭಾವಿಸಿದ್ದೀರಾ ಬಾಬು. ನಿಮ್ಮ ನಾಯಕತ್ವ ನೋಡಿ ಕೊಹ್ಲಿ ನಗುತ್ತಿರುತ್ತಾರೆ. ನೀವು ಎಲ್ಲ ದಿನ ಫೀಲ್ಡಿಂಡ್​ ಮತ್ತು ಬೌಲಿಂಗ್​ ಮಾಡಬೇಕಾದರೆ ಆಟಗಾರರ ನಡುವೆ ಜೋಶ್​ ತುಂಬಬೇಕು. ಅದನ್ನು ಕೊಹ್ಲಿಯಿಂದ ಮಾತ್ರ ಮಾಡಲು ಸಾಧ್ಯ. ಕೊಹ್ಲಿ ಆಟಗಾರರನ್ನು ಹುರಿದುಂಬಿಸುತ್ತಾರೆ. ವಿಶ್ವದಲ್ಲೇ ಕೊಹ್ಲಿ ಓರ್ವ ಉತ್ತಮ ಟೆಸ್​​ ನಾಯಕ ಎಂದು ಶ್ರೀರೆಡ್ಡಿ ಟ್ವೀಟ್​ ಮಾಡಿದ್ದಾರೆ.

ಆದರೆ, ಕೆಲವೊಂದು ವಾದಗಳ ಪ್ರಕಾರ ಇದು ಶ್ರೀರೆಡ್ಡಿ ಅವರ ಮೂಲ ಟ್ವಿಟರ್ ಖಾತೆ ಅಲ್ಲ ಎಂದು ಹೇಳಲಾಗುತ್ತಿದೆ. ನಿಜವಾಗಿಯು ಶ್ರೀರೆಡ್ಡಿ ಟ್ವಿಟರ್ ಖಾತೆ ಹೊಂದಿಲ್ಲ ಎನ್ನುತ್ತಿದ್ದಾರೆ. ಖಾತೆ ಅವರದ್ದಲ್ಲ ಎನ್ನುವುದಾದರೆ, ಸಾರ್ವಜನಿಕವಾಗಿ ಫೇಕ್​ ಅಕೌಂಟ್​ ಬಗ್ಗೆ ಶ್ರೀರೆಡ್ಡಿ ಯಾಕೆ ಹೇಳಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಅವರ ಖಾತೆಯನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ. ಇದು ಶ್ರೀರೆಡ್ಡಿ ಅವರದ್ದೇ ಖಾತೆ ಎಂಬ ವಾದವೂ ಇದೆ. ಸದ್ಯ ಟ್ವೀಟ್​ ಮಾತ್ರ ಪರ-ವಿರೋಧ ವಾಗ್ವಾದಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net