

Abhishek Bachchan: 25 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ‘ಐ ವಾಂಟ್ ಟು ಟಾಕ್’ ಚಿತ್ರಕ್ಕೆ ಮೊದಲ ಅತ್ಯುತ್ತಮ ನಟ ಪ್ರಶಸ್ತಿಯನ್ನು(ಫಿಲ್ಮ್ಫೇರ್) ಪಡೆದ ಅಭಿಷೇಕ್ ಬಚ್ಚನ್ ವೇದಿಕೆಯೊಂದರಲ್ಲಿ ಇತ್ತೀಚಿಗೆ ಭಾವುಕರಾಗಿದ್ದರು. ಅಲ್ಲದೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ಅಭಿಷೇಕ್ ಬಚ್ಚನ್ ಪ್ರಶಸ್ತಿ ಕುರಿತಂತೆ ಸಾಮಾಜಿಕ ಮಾಧ್ಯಮ ವಿಮರ್ಶಕರೊಬ್ಬರು "ಖರೀದಿಸಿದ ಪ್ರಶಸ್ತಿಗಳು ಮತ್ತು ಆಕ್ರಮಣಕಾರಿ ಪಿಆರ್" ಮೂಲಕ ಅವರು ಪ್ರಶಸ್ತಿ ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ನಟ ಅಭಿಷೇಕ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿಯೇ ಆರೋಪಿತರ ವಿರುದ್ಧ ಮೌನ ಮುರಿದಿದ್ದಾರೆ.
ಈ ಕುರಿತು ಪೋಸ್ಟ್ ಮಾಡಿರುವ ಅಭಿಷೇಕ್,'' ದಾಖಲೆಯನ್ನು ಸರಿಪಡಿಸಲು. ನಾನು ಎಂದಿಗೂ ಯಾವುದೇ ಪ್ರಶಸ್ತಿಯನ್ನು ಖರೀದಿಸಿಲ್ಲ ಅಥವಾ ಆಕ್ರಮಣಕಾರಿ PR ಮಾಡಿಲ್ಲ. ಕೇವಲ ಕಠಿಣ ಪರಿಶ್ರಮ, ರಕ್ತ, ಬೆವರು ಮತ್ತು ಕಣ್ಣೀರಿನಿಂದ ಪ್ರಶಸ್ತಿ ಬಂದಿದೆ. ಇನ್ನು ನಿಮ್ಮ ಬಾಯಿ ಮುಚ್ಚಿಸಲು ಉತ್ತಮ ಮಾರ್ಗವೆಂದರೆ ಭವಿಷ್ಯದಲ್ಲಿ ಸಂಭವಿಸುವ ಯಾವುದೇ ಸಾಧನೆಯ ಬಗ್ಗೆ ನೀವು ಎಂದಿಗೂ ಅನುಮಾನಿಸದಂತೆ ಇನ್ನಷ್ಟು ಶ್ರಮಿಸುವುದು. ನಾನು ನಿಮ್ಮ ಮಾತು ತಪ್ಪೆಂದು ಸಾಬೀತುಪಡಿಸುತ್ತೇನೆ! ಎಂದು ಖಡಕ್ ರಿಪ್ಲೈ ಕೊಟ್ಟಿದ್ದಾರೆ.
ಹೌದು, ಅಭಿಷೇಕ್ ಬಚ್ಚನ್ ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಕೆಲವು ಅದ್ಭುತ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇನ್ನೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. ಇದೀಗ, ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ನಟ ಪಡೆದಿದ್ದಾರೆ. ಹೀಗಾಗಿ, ಅವರು ವೇದಿಕೆ ಮೇಲೆ ಅವರು ಭಾವನಾತ್ಮಕ ಭಾಷಣ ಮಾಡಿದರು.
ಇನ್ನು ಅಭಿಷೇಕ್ ಅವರ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚೆಗೆ ಹೌಸ್‌ಫುಲ್ 5 ರಲ್ಲಿ ಕಾಣಿಸಿಕೊಂಡ ಅವರು, ಮುಂದಿನ ಬಾರಿ ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಅವರೊಂದಿಗೆ ಕಿಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್)