

Khushbu Sundar : ಇಂದಿಗೂ ಸಾವಿರಾರು ಅಭಿಮಾನಿಗಳ ಮನದಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ಎವರ್ಗ್ರೀನ್ ನಟಿಯರಲ್ಲಿ ಒಬ್ಬರೆಂದರೆ ಅದು ಖುಷ್ಬೂ ಮಾತ್ರ. ಅವರ ಮೇಲಿನ ಅಭಿಮಾನ ಎಷ್ಟರಮಟ್ಟಿಗೆ ಇದೆ ಅಂದ್ರೆ ಅವರ ಹೆಸರಲ್ಲಿ ಅಭಿಮಾನಿಗಳು ದೇವಸ್ಥಾನವನ್ನೇ ನಿರ್ಮಿಸಿದ್ದಾರೆ. ಖುಷ್ಬೂ ಅವರು 90ರ ದಶಕದ ಮುಂಚೂಣಿ ನಟಿಯರಲ್ಲಿ ಒಬ್ಬರು. ಕನ್ನಡಿಗರಿಗಂತೂ ಖುಷ್ಬೂ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ.
ಖುಷ್ಬೂ ಸುಂದರ್ ನಟನೆಯಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲೂ ಸಾಧನೆ ಮಾಡಿದ ವ್ಯಕ್ತಿ. ಒಂದು ಕಾಲದಲ್ಲಿ ಪಡ್ಡೆಗಳ ನಿದ್ರೆಗೆ ಭಂಗ ತಂದಿದ್ದ ಈ ಸುರ ಸುಂದರಿಯ ಹೊಸ ಲುಕ್, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ, ಭಾರಿ ಚರ್ಚೆಗೂ ನಾಂದಿ ಆಡಿದೆ.
54ನೇ ವಯಸ್ಸಿನಲ್ಲಿ ಖುಷ್ಬೂ ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಒಂಬತ್ತು ತಿಂಗಳ ಕಠಿಣ ಪ್ರಯತ್ನದ ನಂತರ ನಟಿ ಈ ಸಾಧನೆ ಮಾಡಿದ್ದಾರೆ. 'ಬ್ಯಾಕ್ ಟು ದಿ ಫ್ಯೂಚರ್' ಎಂಬ ಶೀರ್ಷಿಕೆಯೊಂದಿಗೆ ತೂಕ ಇಳಿಸಿಕೊಂಡಿರುವ ವಿಡಿಯೋವನ್ನು ಖುಷ್ಬೂ ಹಂಚಿಕೊಂಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ, ಆ ವಿಡಿಯೋಗೆ ಅನೇಕ ಕಾಮೆಂಟ್‌ಗಳು ಮತ್ತು ಲೈಕ್‌ಗಳು ಬಂದಿವೆ.
ಹೆಚ್ಚಿನ ಜನರು ನಟಿಯನ್ನು ಹೊಗಳಿದರೆ, ಇತರರು ನೆಗಿಟಿವ್ ಕಾಮೆಂಟ್ಗಳನ್ನು ಮಾಡಿದ್ದಾರೆ. ಈ ತೂಕ ನಷ್ಟಕ್ಕೆ ಕಾರಣ 'ಮೌಂಜಾರೊ' ಇಂಜೆಕ್ಷನ್ ಕಾರಣ ಎಂದು ನೆಟ್ಟಿಗನೊಬ್ಬ ಹೇಳಿದ್ದಾನೆ. ಅಂದಹಾಗೆ, ಟೈಪ್ 2 ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಮೌಂಜಾರೊ ಇಂಜೆಕ್ಷನ್ ಕೊಡಲಾಗುತ್ತದೆ. ಇದನ್ನು ಆಹಾರ ಮತ್ತು ವ್ಯಾಯಾಮದ ಜೊತೆಗೆ ಬಳಸಲಾಗುತ್ತದೆ.
ಯಾವಾಗ ನೆಟ್ಟಿಗನೊಬ್ಬ ಮೌಂಜಾರೊ ಇಂಜೆಕ್ಷನ್ ಬಗ್ಗೆ ಮಾತನಾಡಿದನೋ ಆಕ್ರೋಶಗೊಂಡ ಖುಷ್ಬೂ, ನೀವು ಎಂತಹ ನೋವಿನ ವ್ಯಕ್ತಿ. ನೀವು ಎಂದಿಗೂ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮುಖವನ್ನು ತೋರಿಸುವುದಿಲ್ಲ. ಏಕೆಂದರೆ ನೀವು ಒಳಗೆ ಕೊಳಕು ಎಂದು ನಿಮಗೆ ತಿಳಿದಿದೆ. ನಿಮ್ಮ ಹೆತ್ತವರ ಬಗ್ಗೆ ನನಗೆ ವಿಷಾದವಿದೆ ಎಂದಿದ್ದಾರೆ.
ಅಂದಹಾಗೆ, ಖುಷ್ಬೂ ಅವರು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತೂಕ ಇಳಿಸಿಕೊಳ್ಳಲು ಪ್ರಾರಂಭಿಸಿದರು. ಆ ಸಮಯದಲ್ಲಿ ಅವರ ತೂಕ 93 ಕೆಜಿ ಇತ್ತು. ನಾನು ಬೆಳಿಗ್ಗೆ ಒಂದು ಗಂಟೆ ವ್ಯಾಯಾಮ ಮಾಡುತ್ತಿದ್ದೆ. ನಂತರ ಸಂಜೆ 45 ರಿಂದ 50 ನಿಮಿಷಗಳ ಕಾಲ ವಾಕಿಂಗ್ ಮಾಡುತ್ತಿದ್ದೆ. ನನ್ನ ಆಹಾರಕ್ರಮವನ್ನೂ ನಿಯಂತ್ರಿಸುತ್ತಿದ್ದೆ ಎಂದು ಸ್ವತಃ ಖುಷ್ಬೂ ಅವರೇ ಆ ಸಮಯದಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಹೀಗಾಗಿ ಖುಷ್ಬೂ ಅವರು ಯಾವುದೇ ಇಂಜಕ್ಷನ್ ತೆಗೆದುಕೊಂಡು ತೂಕ ಇಳಿಸಿಲ್ಲ ಎಂದು ಹೇಳಬಹುದಾಗಿದೆ.
ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಹಲವು ಚಲನಚಿತ್ರಗಳನ್ನು ಮಾಡಿರುವ ಖುಷ್ಬೂ ಕೊನೆಯದಾಗಿ ವನವಾಸ್ ಚಿತ್ರದಲ್ಲಿ ಕಾಣಿಸಿಕೊಂಡರು. ಅವರು ಪ್ರಸ್ತುತ ತಮಿಳಿನಲ್ಲಿ ಧಾರಾವಾಹಿ ಮಾಡುತ್ತಿದ್ದಾರೆ. ಅವರು ಹಾಸ್ಯ ಕಾರ್ಯಕ್ರಮವೊಂದರಲ್ಲಿ ಜಡ್ಜ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)