

Diabetic Pet Dog : ರಕ್ತದಲ್ಲಿನ ಅನಿಯಂತ್ರಿಯ ಸಕ್ಕರೆ ಮಟ್ಟವನ್ನು ಹೊಂದಿರುವ ಮುಂಬೈನ ಸಾಕು ನಾಯಿಯೊಂದು ತನ್ನ ಗ್ಲೂಕೋಸ್ ಮಟ್ಟವನ್ನು ಟ್ರ್ಯಾಕ್ ಮಾಡಲು ತಾಂತ್ರಿಕ ಸಾಧನವನ್ನು ಪಡೆದುಕೊಂಡಿದೆ. 3 ವರ್ಷದ ಗಂಡು ಶ್ವಾನ, ಪರೇಲ್‌ನಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗೆ ಶುಕ್ರವಾರ ದಾಖಲಾದಾಗಿನಿಂದ 'ನಿರಂತರ ಗ್ಲೂಕೋಸ್ ಮಾನಿಟರ್' ಅಥವಾ ಸಿಜಿಎಂ ಸೆನ್ಸಾರ್ ಅನ್ನು ಧರಿಸುತ್ತಿದೆ.
ಸಿಜಿಎಂ ಅನ್ನೋದು ಪ್ರಾಣಿಯ ಕಿಬ್ಬೊಟ್ಟೆಯ ಪ್ರದೇಶ ಅಥವಾ ಕುತ್ತಿಗೆಯ ಮೇಲಿನ ಪ್ರದೇಶಕ್ಕೆ ಪಿನ್ ಮಾಡಲಾದ ವೃತ್ತಾಕಾರದ ಪ್ಯಾಚ್ ಆಗಿದೆ. ಇದು 10 ರೂಪಾಯಿ ನಾಣ್ಯಕ್ಕಿಂತ ಸ್ವಲ್ಪ ದೊಡ್ಡ ವ್ಯಾಸವನ್ನು ಹೊಂದಿರುತ್ತದೆ. ಇದರ ಸೆನ್ಸಾರ್, ಲಿಂಕ್ ಮಾಡಲಾದ ಆ್ಯಪ್ ಮೂಲಕ ಸೆಲ್‌ಫೋನ್‌ನಲ್ಲಿ ಗ್ಲೂಕೋಸ್ ಮಟ್ಟವನ್ನು ನಿರಂತರವಾಗಿ ತೋರಿಸುತ್ತದೆ. ಈ ಸೆನ್ಸಾರ್ ಎರಡು ವಾರಗಳವರೆಗೆ ಕಾರ್ಯನಿರ್ವಹಿಸುತ್ತದೆ. ಬಳಿಕ ಅದನ್ನು ದೇಹದಿಂದ ತೆಗೆದು ಎಸೆಯಬೇಕು.
ಇನ್ಸುಲಿನ್ ಪಡೆಯುತ್ತಿದ್ದ ನಾಯಿಗೆ ಆಸ್ಪತ್ರೆಗೆ ಸೇರಿಸಿದ ಸಂದರ್ಭದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು 400 mg/dl ಗಿಂತ ಹೆಚ್ಚಿತ್ತು. ಸಾಮಾನ್ಯವಾಗಿ ಸಕ್ಕರೆ ಮಟ್ಟಗಳು 80 ರಿಂದ 120 mg/dl ವರೆಗೆ ಇರಬೇಕು. ಹೆಚ್ಚಾಗಿ ಇರುವುದರಿಂದ ಗ್ಲೂಕೋಸ್ ಸೆನ್ಸಾರ್, ಶ್ವಾನದ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಇನ್ಸುಲಿನ್ ಪ್ರಮಾಣವನ್ನು ಹೊಂದಿಸಲು ಸಹಾಯ ಮಾಡುತ್ತದೆ.
ಸಾಕುಪ್ರಾಣಿಗಳ ಮೇಲೆ CGM ಬಳಸಿರುವುದು ಅಪರೂಪದ ಸಂದರ್ಭ. ಇದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ ಎಂದು ಸಾಕುಪ್ರಾಣಿಗೆ ಚಿಕಿತ್ಸೆ ನೀಡುತ್ತಿರುವ ಮುಂಬೈ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಚಂದ್ರಕಾಂತ್ ಗಾಲ್ಧರ್ ಹೇಳಿದರು. ಮಧುಮೇಹ ಹೊಂದಿರುವ ಮನುಷ್ಯರಿಗೆ, ಸಕ್ಕರೆ ಮಟ್ಟವನ್ನು ಪತ್ತೆಹಚ್ಚಲು ಸೆನ್ಸಾರ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ ಎಂದರು.
ಅಂದಹಾಗೆ ಸೆನ್ಸರ್ ಇಲ್ಲದಿದ್ದರೆ, ಸಾಕು ನಾಯಿಯ ರಕ್ತದಲ್ಲಿನ ಸಕ್ಕರೆಯನ್ನು ಮೇಲ್ವಿಚಾರಣೆ ಮಾಡಲು ಇರುವ ಪರ್ಯಾಯ ಮಾರ್ಗವೆಂದರೆ ಅದು ಗ್ಲುಕೋಮೀಟರ್. ಅಂದರೆ, ಅದರ ಗ್ಲೂಕೋಸ್ ಮಟ್ಟವನ್ನು ತಿಳಿಯಲು ಪ್ರತಿ ಬಾರಿಯೂ ಸೂಜಿಯಿಂದ ಚುಚ್ಚುವುದು ಮತ್ತು ರಕ್ತವನ್ನು ತೆಗೆದುಕೊಳ್ಳುವುದು. ಆದರೆ, ಗ್ಲುಕೋಮೀಟರ್‌ನೊಂದಿಗೆ ಬಹು ಚುಚ್ಚುವಿಕೆಯು ಆ ಪ್ರಾಣಿ ಎಷ್ಟು ಸಹಕಾರಿಯಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಸಾಕುಪ್ರಾಣಿಗಳು ಸಹಕರಿಸುವುದಿಲ್ಲ. ಆದ್ದರಿಂದ ಸೆನ್ಸಾರ್ ಉತ್ತಮ ಮಾರ್ಗವಾಗಿದೆ.
ಇನ್ನು ಗ್ಲುಕೋಮೀಟರ್ ಬಳಸುವಾಗ ಸೂಜಿ ಚುಚ್ಚುವಿಕೆಯಿಂದಾಗಿ ನಿಕ್ಕಿ ಎಂಬ ಸಾಕುಪ್ರಾಣಿ ನೋವು ಅನುಭವಿಸುತ್ತಿರುವಂತೆ ತೋರುತ್ತಿತ್ತು ಎಂದು ಸಾಕುಪ್ರಾಣಿ ಪೋಷಕಿ ವೈಷ್ಣವಿ ಮಾಲಿ ಹೇಳಿದ್ದಾರೆ. ಅವರು ಗ್ಲೂಕೋಸ್ ಪರೀಕ್ಷೆಗಳಿಗಾಗಿ ನಿಕ್ಕಿಯ ಕಿವಿಯಿಂದ ರಕ್ತವನ್ನು ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ನಿಕ್ಕಿಯ ನೋವನ್ನು ಕಡಿಮೆ ಮಾಡಲು ನಾವು ಸೆನ್ಸಾರ್ ಬಳಸಲು ಒಪ್ಪಿಕೊಂಡೆವು ಎಂದು ತಿಳಿಸಿದ್ದಾರೆ.
ಮನುಷ್ಯರಂತೆ ಪ್ರಾಣಿಗಳಲ್ಲೂ ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಬೊಜ್ಜು ಮುಂತಾದ ಜೀವನಶೈಲಿ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಸಾಕುಪ್ರಾಣಿಗಳಿಗೂ ಮನೆಯಲ್ಲಿ ಬೇಯಿಸಿದ ಆಹಾರ ಕೊಡಬೇಕು. ಅಲ್ಲದೆ, ಇಂತಹ ಕಾಯಿಲೆಗಳಿಂದ ಅವುಗಳನ್ನು ದೂರವಿಡಲು ವ್ಯಾಯಾಮ ಮಾಡುವಂತೆ ಮಾಡಬೇಕಿದೆ ಎಂದು ಪ್ರಾಣಿ ತಜ್ಞರು ತಿಳಿಸಿದ್ದಾರೆ.
ಗ್ಲೂಕೋಸ್ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಗ್ಲೂಕೋಸ್ ಸೆನ್ಸಾರ್ ಅನುಕೂಲಕರವಾಗಿದ್ದರೂ, 14-15 ದಿನಗಳವರೆಗೆ ಬಾಳಿಕೆ ಬರುವ ಸೆನ್ಸಾರ್ಗಳ ಹೆಚ್ಚಿನ ವೆಚ್ಚ ಮತ್ತು ಎಲ್ಲ ಮೊಬೈಲ್ ಸಾಧನಗಳೊಂದಿಗೆ ಅದರ ಹೊಂದಾಣಿಕೆಯ ಕೊರತೆಯು ಒಂದು ಸವಾಲಾಗಿದೆ. ಅಲ್ಲದೆ, ದೇಹಕ್ಕೆ ಜೋಡಿಸಲಾದ ಸೆನ್ಸಾರ್, ಸ್ನಾನ ಮಾಡುವಾಗ ಅಥವಾ ಓಡುವಾಗ ಪ್ರಾಣಿಗೆ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಯೂ ಇದೆ. (ಏಜೆನ್ಸೀಸ್)