ಓಟಿಟಿಯಲ್ಲಿ 'ಜಗಮೇ ತಂಧಿರಮ್' ಬಿಡುಗಡೆಯಾಗುತ್ತಿರುವ ಬಗ್ಗೆ ಧನುಷ್​ ಬೇಸರ

Jagame-Thandiram-Final
Published on

ಚೆನ್ನೈ: ಕಾಲಿವುಡ್​ ಸ್ಟಾರ್ ನಟ ಧನುಷ್ ಅಭಿನಯದ 'ಜಗಮೇ ತಂಧಿರಮ್' ಚಿತ್ರವು ಜೂನ್ 18ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್​ ಆಗುತ್ತಿರುವ ವಿಷಯ ಹಳೆಯದು. ಈಗಾಗಲೇ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಧನುಶ್​ ಅಭಿಮಾನಿಗಳು ಚಿತ್ರದ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ, ಈ ಬಗ್ಗೆ ಧನುಶ್​ಗೆ ಬೇಸರವಿದ್ದು, ಆ ಬೇಸರವನ್ನು ಅವರು ಟ್ವೀಟ್​ ಮೂಲಕ ಹೊರಹಾಕಿದ್ದಾರೆ.

ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಬೇಕಿತ್ತು. ಕೊರೋನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಸದ್ಯದ ಸ್ಥಿತಿ ನೋಡಿದರೆ ಚಿತ್ರಮಂದಿರ ತೆರೆಯುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ ಇದೀಗ ಓಟಿಟಿ ಮೊರೆ ಹೋಗಿದೆ ಚಿತ್ರತಂಡ.

ಚಿತ್ರವೇನೋ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರಮಂದಿರಗಳಲ್ಲಿ ಚಿತ್ರ ಮೊದಲು ಬಿಡುಗಡೆಯಾಗಬೇಕಿತ್ತು ಎಂಬುದು ಧನುಷ್​ ಅಭಿಪ್ರಾಯ. ''ಜಗಮೇ ತಂಧಿರಮ್​' ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಚಿತ್ರಮಂದಿರಗಳಲ್ಲಿ ಆ ಚಿತ್ರವನ್ನು ನೋಡುವ ಮಜ ಮತ್ತು ಅನುಭವವೇ ಬೇರೆ. ಆದರೆ, ಕಾರಣಾಂತರಗಳಿಂದ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಪ್ರೇಕ್ಷಕರು ಓಟಿಟಿಯಲ್ಲೇ ಚಿತ್ರ ನೋಡಿ ಖುಷಿಪಡುತ್ತಾರೆ ಎಂಬ ನಿರೀಕ್ಷೆ ಇದೆ' ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಒಬ್ಬ ಸಾಮಾನ್ಯನೊಬ್ಬ ಅಂತಾರಾಷ್ಟ್ರೀಯ ಮಟ್ಟದ ಡಾನ್​ ಆಗಿ ಹೇಗೆ ರೂಪುಗೊಳ್ಳುತ್ತಾನೆ ಎಂಬ ಕಥೆ ಇರುವ 'ಜಗಮೇ ತಂಧಿರಮ್' ಚಿತ್ರಕ್ಕೆ ತಮಿಳುನಾಡು ಮತ್ತು ಇಂಗ್ಲೆಂಡ್​ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಐಶ್ವರ್ಯಾ ಲಕ್ಷ್ಮೀ, ಜೊಜಿ ಜಾರ್ಜ್, ಕಲೈಅರಸನ್, ಶರತ್ ರವಿ, ಜೇಮ್ಸ್ ಕೊಸ್ಮೋ ಪಾತ್ರವರ್ಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net