VIDE0| ದೆವ್ವ ಬಿಡಿಸಲು ಜೀವಂತ ಕೋಳಿಯನ್ನೇ ನುಂಗುವಂತೆ ಹಿಂಸಿಸಿದ ಮಂತ್ರವಾದಿ! ಬೆಚ್ಚಿ ಬೀಳಿಸುತ್ತೆ ಈ ದೃಶ್ಯ

mantravadi -3
Published on

ಮಂಗಳೂರು: ಜೀವಂತ ಕೋಳಿಯನ್ನೇ ನುಂಗುವಂತೆ ಯುವಕನಿಗೆ ಮಂತ್ರವಾದಿ ಹೇಳಿದ. ತಿನ್ನದಿದ್ದಾಗ ಚಾಟಿ ಏಟು ಕೊಟ್ಟ. ನೆರೆದಿದ್ದವರಿಂದ ಥಳಿಸಿಕೊಂಡ ಯುವಕ ಕೊನೆಗೂ ಕೋಳಿ ರಕ್ತ ಕುಡಿದ. ಇಷ್ಟಕ್ಕೆ ಸುಮ್ಮನಾಗದ ಆತ ಬಳಿಕ ಯುವಕನ ಕೈಯ ಮೇಲೆ ಕರ್ಪೂರ ಹಚ್ಚಿ ಹಿಂಸಿಸಿದ...

ಇದು ಯಾವುದೋ ಹಾರರ್​ ಮೂವಿ ಸೀನ್​ ಅಲ್ಲ. ಬ್ರಹ್ಮರಾಕ್ಷಸನನ್ನು ಬಿಡಿಸುವ ನೆಪದಲ್ಲಿ ಕರಾವಳಿ ಭಾಗದಲ್ಲಿ ನಡೆದ ಹಿಂಸಾಚಾರ! ಮೂಢನಂಬಿಕೆಗೆ ಪ್ರಚೋದನೆ ನೀಡುವಂತಹ ಪ್ರೇತ ಉಚ್ಛಾಟನೆಯ ಹೆಸರಿನಲ್ಲಿ ಯುವಕನೊಬ್ಬನ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕನೊಬ್ಬನ ಮೇಲೆ ಬ್ರಹ್ಮರಾಕ್ಷಸ ಮೆಟ್ಟಿಕೊಂಡಿದೆ. ಅದನ್ನು ಹೊಡೆದೋಡಿಸಿವೆ ಎಂದು ತಡರಾತ್ರಿ ಪೂಜೆ ಮಾಡಿದ ಮಂತ್ರವಾದಿಯೊಬ್ಬ, ಆವೇಶ ಭರಿತ ಯುವಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಳಿಕ ಯುವಕನ ಸಂಬಂಧಿಕರ ಮೂಲಕ ಬೆತ್ತದಿಂದ ಹಲ್ಲೆ ನಡೆಸುವ, ಕರ್ಪೂರವನ್ನು ಕೈಗೆ ಇಟ್ಟು ಉರಿಸುವ ದೃಶ್ಯ ಆ ವಿಡಿಯೋದಲ್ಲಿದೆ. ಈ ಮಧ್ಯೆ ಸಹೋದರರು ಹೊ-ಕೈ ನಡೆಸುವ ದೃಶ್ಯಗಳೂ ವಿಡಿಯೋದಲ್ಲಿ ಸೆರೆಯಾಗಿದೆ.

ಸುಮಾರು 15 ನಿಮಿಷಗಳ ವಿಡಿಯೋದುದ್ದಕ್ಕೂ ಮೂಢನಂಬಿಕೆಗೆ ಪ್ರಚೋದನೆ ನೀಡುವ ಕೃತ್ಯಗಳು ಸಾಬೀತಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿವೆ. ಆದರೆ ಈ ಘಟನೆ ಯಾವಾಗ? ಎಲ್ಲಿ ನಡೆದದ್ದು ಎಂಬ ಬಗ್ಗೆ ಮಾಹಿತಿಯಿಲ್ಲ. ತುಳುವಿನಲ್ಲೇ ಸಂಭಾಷಣೆ ಇರುವ ಕಾರಣ ಕರಾವಳಿ ಜಿಲ್ಲೆಯಲ್ಲೇ ಇದು ನಡೆದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net