ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 12 ದಿನಗಳಿಂದ ಸಿಎಂ ಸ್ಥಾನಕ್ಕೆ ನಡೆಯುತ್ತಿದ್ದ ಹಗ್ಗಜಗ್ಗಾಟ ಬುಧವಾರ(ಡಿಸೆಂಬರ್ 4) ಕೊನೆಗೊಂಡಿದೆ. ಇಂದು ನಡೆದ ಸಭೆಯಲ್ಲಿ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ದೇವೇಂದ್ರ ಫಡ್ನವೀಸ್ ಅವರನ್ನು ಆಯ್ಕೆ ಮಾಡಲಾಗಿದೆ. ನಾಳೆ ಅಂದರೆ ಡಿಸೆಂಬರ್ 5 ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್(Maharashtra CM)
ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನು ಓದಿ: ದಕ್ಷಿಣ ಕೊರಿಯಾದಲ್ಲಿ ಮಾರ್ಷಲ್ ಕಾನೂನು ಹೇರಿಕೆ; ನಿರ್ಧಾರದ ಹಿಂದಿನ ಕಾರಣ ತಿಳಿಸಿದ ಅಧ್ಯಕ್ಷ ಯೂನ್ ಸುಕ್-ಯೋಲ್ | South Korea
ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ಮಹಾರಾಷ್ಟ್ರ ವಿಧಾನಸಭೆ ಭವನದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಡಿಸೆಂಬರ್ 5 ರಂದು ಸಂಜೆ 5 ಗಂಟೆಗೆ ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವು ಕೇಂದ್ರ ಸಚಿವರು ಹಾಗೂ ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ದೇವೇಂದ್ರ ಫಡ್ನವೀಸ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೇಂದ್ರ ವೀಕ್ಷಕಿ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯ ನಂತರ ವಿಜಯ್ ರೂಪಾನಿ ಮಾತನಾಡಿ, ದೇವೇಂದ್ರ ಫಡ್ನವೀಸ್ ಹೆಸರನ್ನು ಎಲ್ಲಾ ಶಾಸಕರು ಸರ್ವಾನುಮತದಿಂದ ಅನುಮೋದಿಸಿದ್ದಾರೆ. ಇದಾದ ನಂತರ ಫಡ್ನವೀಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕ ಎಂದು ಘೋಷಿಸಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟಕ್ಕೆ ಭಾರಿ ಬಹುಮತ ಲಭಿಸಿದೆ. ಬಿಜೆಪಿ ಗರಿಷ್ಠ 132 ಸ್ಥಾನಗಳನ್ನು ಗೆದ್ದಿದೆ. ಏಕನಾಥ್ ಶಿಂಧೆ ಅವರ ಪಕ್ಷದ ಶಿವಸೇನೆಯ ಅಭ್ಯರ್ಥಿಗಳು 57 ಸ್ಥಾನಗಳನ್ನು ಗೆದ್ದಿದ್ದಾರೆ. ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಚುನಾವಣೆಯಲ್ಲಿ 41 ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮಹಾಯುತಿ ಮೈತ್ರಿಕೂಟ ಒಟ್ಟಾರೆ 236 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಗೆ ಐವರು ಸ್ವತಂತ್ರ ಶಾಸಕರ ಬೆಂಬಲವೂ ಸಿಕ್ಕಿದೆ.(ಏಜೆನ್ಸೀಸ್)
ಕೊಲೆ ಆರೋಪದಡಿ ಬಿಟೌನ್ ನಟಿಯ ತಂಗಿ ಅರೆಸ್ಟ್; ಈ ಕುರಿತು ನರ್ಗೀಸ್ ಫಕ್ರಿ ರಿಯಾಕ್ಷನ್ ಹೀಗಿದೆ.. | Nargis Fakhri