

ವಿಜಯವಾಣಿ ಸುದ್ದಿಜಾಲ ಬೈಂದೂರು
ಸರ್ಕಾರದ ಅನುದಾನಗಳಿಂದ ಮಾತ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸಾಧ್ಯವಿಲ್ಲ. ಸದಸ್ಯರ ಆಸಕ್ತಿ, ಅಧಿಕಾರಿಗಳ ಕ್ರಿಯಾಶೀಲತೆ ಮತ್ತು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹೇಳಿದರು.
ಶಿರೂರಿನ ಎಂ.ಎಂ.ಫೌಂಡೇಶನ್ ವತಿಯಿಂದ ಮಂಗಳವಾರ ಸ್ಥಳೀಯ ಗ್ರಾಮ ಪಂಚಾಯಿತಿಗೆ ಕೊಡುಗೆಯಾಗಿ ನೀಡಿದ ಕಸ ಸಾಗಾಟ ವಾಹನ ಹಸ್ತಾಂತರಿಸಿ ಮಾತನಾಡಿದ ಅವರು, ಬಹುತೇಕ ಗ್ರಾಮಗಳಲ್ಲಿ ಕಸ ಸಾಗಾಟ ಮಾಡಲು ವಾಹನ ಸೌಲಭ್ಯವೇ ಇಲ್ಲದಿರುವ ಪರಿಸ್ಥಿತಿಯಲ್ಲಿ ಶಿರೂರು ಗ್ರಾಪಂನಲ್ಲಿ ಎರಡೆರಡು ಕಸ ಸಾಗಾಟ ವಾಹನ ನಿರ್ವಹಣೆ ಮಾಡುತ್ತಿರುವುದು ಮತ್ತು ದಾನಿಗಳು ಊರಿನ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿ ಸಹಕರಿಸುತ್ತಿರುವುದು ಇತರ ಊರುಗಳಿಗೆ ಮಾದರಿ ಎಂದರು.
ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಕಾಪ್ಸಿ ನೂರ್ಮಹ್ಮದ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಂದ್ರ, ಗ್ರಾಮ ಲೆಕ್ಕಾಧಿಕಾರಿ ವಿಜಯ್ ಕುಮಾರ್ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಶಂಕರ ಬಿಲ್ಲವ ಸ್ವಾಗತಿಸಿದರು. ಪತ್ರಕರ್ತ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.