More

  ಅಭಿವೃದ್ಧಿ ಎಂದರೆ ದೇಶದ ಶಿಕ್ಷಣ, ಆರೋಗ್ಯ ಕ್ಷೇತ್ರದ ಬೆಳವಣಿಗೆ; ಸಾಹಿತಿ ಕೆ.ಮರುಳಸಿದ್ದಪ್ಪ ಅಭಿಮತ

  ಬೆಂಗಳೂರು: ದೇಶದ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳಲ್ಲ; ಬದಲಾಗಿ ಆ ದೇಶದ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಗಳು ನಿಜವಾದ ಅಭಿವೃದ್ಧಿಯ ಸಂಕೇತ. ಆದ್ದರಿಂದ ಸರ್ಕಾರಗಳು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡುವ ಅಗತ್ಯವಿದೆ ಎಂದು ಸಾಹಿತಿ ಕೆ.ಮರುಳಸಿದ್ದಪ್ಪ ಅಭಿಪ್ರಾಯಿಸಿದ್ದಾರೆ. ಚಿತ್ರಕಲಾ ಪರಿಷತ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಸಂತ ಪ್ರಕಾಶನದ 12 ವೈದ್ಯಕೀಯ ಸಾಹಿತ್ಯದ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

  ಸಾಕಷ್ಟು ರಾಷ್ಟ್ರಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ಸರ್ಕಾರಗಳೇ ಸಂಪೂರ್ಣವಾಗಿ ನಿರ್ವಹಿಸುವ ಮೂಲಕ ದೇಶದ ಜನರ ಜೀವನವನ್ನು ಸುಧಾರಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಕೇವಲ ಶೇ.2 ರಿಂದ 4ರಷ್ಟು ಮಾತ್ರ ಅನುದಾನ ಮೀಸಲಿಡುತ್ತಿವೆ. ಇದರಿಂದ ಖಾಸಗಿ ಆಸ್ಪತ್ರೆಗಳು ಪಂಚತಾರಾ ಹೊಟೇಲ್‌ಗಳಂತೆ ತಲೆ ಎತ್ತುತ್ತಿವೆ. ಸರ್ಕಾರ ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಸಾಧಿಸಬೇಕು ಎಂದು ಅವರು ಸಲಹೆ ನೀಡಿದರು.

  ಹಿಂದಿನ ಕಾಲದಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿಯ ಕೊರತೆ ಇತ್ತು. ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತಿದೆ. ಈಗಿರುವ ಸರ್ಕಾರಿ ಆಸ್ಪತ್ರೆಗೆಳ ಸಂಖ್ಯೆ ದ್ವಿಗುಣಗೊಂಡಲ್ಲಿ ಬಡವರು, ಸಾಮಾನ್ಯ ಜನರಿಗೆ ಹೆಚ್ಚಿನ ಸೇವೆ ದೊರೆಯಲು ಸಾಧ್ಯ ಎಂದು ಮರುಳಸಿದ್ದಪ್ಪ ತಿಳಿಸಿದರು.

  ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅವರನ್ನು ಅಭಿನಂದಿಸಿ, ಅವರು ನಡೆಸುತ್ತಿರುವ ‘ಸಮಾಧಾನ’ ಸಂಸ್ಥೆಗೆ ವಸಂತ ಪ್ರಕಾಶನ ಸಂಸ್ಥೆಯಿಂದ 25 ಸಾವಿರ ರೂಪಾಯಿ ದೇಣಿಗೆ ನೀಡಲಾಯಿತು. ಪ್ರಸೂತಿ ಮತ್ತು ಸೀರೋಗ ತಜ್ಞೆ ಹಾಗೂ ಲೇಖಕಿ ಡಾ.ವೀಣಾ ಭಟ್ ಕೃತಿಗಳನ್ನು ಪರಿಚಯ ಮಾಡಿದರು. ಸಮಾರಂಭದಲ್ಲಿ ಕೃತಿಗಳ ಸಂಪಾದಕಿ ಡಾ.ವಸುಂಧರಾ ಭೂಪತಿ, ನ್ಯೂಕ್ಲಿಯರ್ ಮೆಡಿಸಿನ್ ತಜ್ಞೆ ಡಾ.ಆರ್.ಕೆ.ಸರೋಜ, ಹಿರಿಯ ಪತ್ರಕರ್ತ ರವೀಂದ್ರ ಭಟ್, ಲೇಖಕರಾದ ಡಾ.ಸುರೇಶ್ ವಿ.ಸಗರದ, ಡಾ.ಕೆ.ಎಸ್.ಪವಿತ್ರ, ಥಟ್ ಅಂತ ಹೇಳಿ ಖ್ಯಾತಿಯ ಡಾ. ನಾ.ಸೋಮೇಶ್ವರ, ವಸಂತ ಪ್ರಕಾಶನದ ಮುಖ್ಯಸ್ಥ ಮುರುಳಿ ಮತ್ತಿತರರಿದ್ದರು.

  ಪುರಾತನ ವೈದ್ಯಕೀಯ ಪದ್ಧತಿ: ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಹಲವು ವಿಭಿನ್ನ ವೈದ್ಯಕೀಯ ಪದ್ಧತಿಗಳಿದ್ದು, ಅವುಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯದೇ ಇದ್ದುದರಿಂದ ಕೇವಲ ಇಂಗ್ಲಿಷ್ ಮೆಡಿಸಿನ್ ಪದ್ಧತಿಯೊಂದನ್ನೇ ಜನ ನೆಚ್ಚಿಕೊಳ್ಳುವಂತಾಗಿದೆ. ಆಯುರ್ವೇದ ವೈದ್ಯರು ಮತ್ತು ಇಂಗ್ಲಿಷ್ ಮೆಡಿಸಿನ್ ಪ್ರಾಕ್ಟೀಸ್ ಮಾಡುವವರಲ್ಲಿ ಹೊಂದಾಣಿಕೆ ಕೊರತೆ ಇದ್ದು, ಇತ್ತೀಚೆಗೆ ಸಾಮರಸ್ಯ ಮೂಡುತ್ತಿರುವುದಕ್ಕೆ ಸಾಕ್ಷಿಯಾಗಿ ಇಂದು ಎಲ್ಲ ವೈದ್ಯಕೀಯ ಪದ್ದತಿಗಳ ಕುರಿತು ಹೊರಬಂದಿರುವ 12 ಕೃತಿಗಳು ಒಂದೇ ವೇದಿಕೆಯಲ್ಲಿ ಬಿಡುಗಡೆಗೊಳ್ಳುತ್ತಿವೆ ಎಂದು ಮರುಳಸಿದ್ದಪ್ಪ ಸಂತಸ ವ್ಯಕ್ತಪಡಿಸಿದರು.

  ಬಿಡುಗಡೆಗೊಂಡ 12 ಕೃತಿಗಳು: ವಸಂತ ಪ್ರಕಾಶನವು ನಾಲ್ಕು ಮಾಲಿಕೆಯಲ್ಲಿ 45ಕ್ಕೂ ಹೆಚ್ಚು ವೈದ್ಯಕೀಯ ಸಾಹಿತ್ಯ ಕೃತಿಗಳನ್ನು ಹೊರತಂದಿದ್ದು, 4ನೇ ಆವೃತ್ತಿಯಲ್ಲಿ 12 ಕೃತಿಗಳನ್ನು ಇಂದು ಬಿಡುಗಡೆ ಮಾಡಿದೆ. ಹಿರಿಯ ಸಾಹಿತಿಗಳ ಜೊತೆಗೆ ಉದಯೋನ್ಮುಖರಿಗೆ ಅವಕಾಶ ನೀಡಿರುವುದು ವಸಂತ ಪ್ರಕಾಶನದ ಹಿರಿಮೆ ಎಂದು ಸಂಪಾದಕಿ ಡಾ.ವಸುಂಧರಾ ಭೂಪತಿ ತಿಳಿಸಿದರು.

  ಆರೋಗ್ಯ ಮತ್ತು ಜೀವನ, ಹರೆಯದವರ ಮನೋಲೋಕ, ಮಾನವ ದೇಹದ ಮಿಲಿಟರಿ ಪಡೆ, ಚಿತ್ತವೃತ್ತಿ, ಜೀವನಶೈಲಿಯ ಕಾಯಿಲೆಗಳು, ಮಕ್ಕಳ ಮನ ಮೊಗ್ಗಿನ ಹೂವನ, ಕಣ್ಣಿನ ಕಾಯಿಲೆಗಳು, ಸ್ವಯಂ ಪ್ರತಿರೋಧಕ ಕಾಯಿಲೆಗಳು, ಪ್ರಕೃತಿಯ ಅದ್ಭುತ ಸೃಷ್ಟಿ ಸೀ, ಸಾಮಾನ್ಯ ಪ್ರಯೋಗಾಲಯ ಪರೀಕ್ಷೆಗಳು ಹಾಗೂ ಗಿಲ್ಲನ್ ಬ್ಯಾರಿ ಎಂಬ ಒಟ್ಟು 13 ಕೃತಿಗಳು ಲೋಕಾರ್ಪಣೆಗೊಂಡಿದ್ದು ಕೃತಿಗಳಿಗಾಗಿ ಸಂಪರ್ಕಿಸಿ 98863 99125.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts