

ತುಮಕೂರು: ರಾಜ್ಯಕ್ಕೆ ಸಾಮಾಜಿಕ ನ್ಯಾಯದ ಅಡಿಪಾಯ ಹಾಕಿದ ಧೀಮಂತ ನಾಯಕ ದೇವರಾಜ ಅರಸು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಬಣ್ಣಿಸಿದರು.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ರವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಸು ಅವರ ಜನಪರ ಕಾರ್ಯಕ್ರಮ, ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯ ಮಾಡಿಕೊಡಬೇಕಾದ ಅತ್ಯವಶ್ಯ ಇದೆ ಎಂದರು.
ರಾಜಕಾರಣ ಹಾಗೂ ಸಾರ್ವಜನಿಕ ಜೀವನ ಈ ಎರಡನ್ನು ನಿರ್ವಹಿಸುವ ಸಂದರ್ಭದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಇವುಗಳನ್ನೆಲ್ಲ ಮೆಟ್ಟಿನಿಂತು ರಾಜ್ಯದ ಶೋಷಿತ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಂಚೂಣಿಗೆ ತರಬೇಕೆಂಬ ಆಶಯವನ್ನು ಇಟ್ಟುಕೊಂಡು ಕೆಲಸ ಮಾಡಿದವರು ಅರಸು ಅವರು ಆ ಸಮುದಾಯಗಳ ಧ್ವನಿಕೊಟ್ಟರು. ಸಂವಿಧಾನದ ಮೂಲ ಆಶಯ ಎಲ್ಲಾ ವರ್ಗದ ಜನರನ್ನು ಸಮಾನತೆಯಿಂದ ಕಾಣಬೇಕು ಎಂಬುವುದು. ಅದನ್ನು ಎಲ್ಲರೂ ಮೊದಲು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆವಹಿಸಿದ್ದರು. ಸಂಸದ ಜಿಎಸ್ ಬಸವರಾಜು, ಮೇಯರ್ ಎಂ.ಪ್ರಭಾವತಿ, ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಜಿಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತೆ ಬಿ.ವಿ.ಆಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ಶಹಾಪೂರವಾಡ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಗಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರು
ವಿವೇಕಾನಂದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ , ಸಾದರ ಜನಾಂಗದ ಪಿ.ಮೂರ್ತಿ , 3 ದಶಕಗಳ ಕಾಲ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಾಡುಗೊಲ್ಲ ಸಮುದಾಯದ ಜಿ.ಎಂ.ಸಣ್ಣಮುದ್ದಯ್ಯ, ಕನಕ ಸೇನೆ ಜಿಲ್ಲಾಧ್ಯಕ್ಷ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕುರುಬ ಸಮುದಾಯದ ಕೆಂಪರಾಜು, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎಚ್.ವಿ.ಮಂಜೇಶ್ ಹಾಗೂ ವಿಶ್ವಕರ್ಮ ಸಮುದಾಯದ ಜಗದಾಂಭ ನಂಜಪ್ಪ ಅವರನ್ನು ಜಿಲ್ಲಾ ಮಟ್ಟದ ಅರಸು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.