ಪ್ರಧಾನಿ ಮೋದಿಯ ಪದವಿ ವಿವರ ಅಗತ್ಯವಿಲ್ಲ: ಕೇಜ್ರಿವಾಲ್​ಗೆ 25 ಸಾವಿರ ರೂ. ದಂಡ ವಿಧಿಸಿದ​ ಹೈಕೋರ್ಟ್​

PM Modi Aravind Kejriwal
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಶಿಕ್ಷಣದ ಮಾಹಿತಿಯನ್ನು ನೀಡಲು ಗುಜರಾತ್​ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಸೂಚನೆಯ ಆದೇಶವನ್ನು ರಾಜ್ಯ ಹೈಕೋರ್ಟ್​ ತಡೆಹಿಡಿದಿದ್ದು, ಮಾಹಿತಿಯ ಅಗತ್ಯವಿಲ್ಲ ಎಂದು ಹೇಳಿದೆ.

ಮಾಹಿತಿಯನ್ನು ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರಿಗೆ ಹೈಕೋರ್ಟ್​ 25 ಸಾವಿರ ರೂ. ದಂಡ ಸಹ ವಿಧಿಸಿದೆ. ದಂಡದ ಹಣವನ್ನು ಗುಜರಾತ್​ ರಾಜ್ಯ ಕಾನೂನು ಸೇವಾ ಮಂಡಳಿಗೆ ಜಮೆ ಮಾಡುವಂತೆ ಸೂಚನೆ ನೀಡಿದೆ.

2016ರಲ್ಲಿ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಗೆ ಪ್ರತಿಕ್ರಿಯಿಸಿದ ಕೇಂದ್ರ ಮಾಹಿತಿ ಆಯೋಗವು ಪ್ರಧಾನ ಮಂತ್ರಿ ಕಚೇರಿ (ಪಿಎಂಒ), ಗುಜರಾತ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯಗಳಿಗೆ ಪಿಎಂ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಮಾಹಿತಿಯನ್ನು ಒದಗಿಸುವಂತೆ ನಿರ್ದೇಶನ ನೀಡಿತು. ಬಳಿಕ ಈ ಆದೇಶವನ್ನು ಪ್ರಶ್ನಿಸಿ ಗುಜರಾತ್​ ವಿಶ್ವವಿದ್ಯಾಲಯ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಕಳೆದ ತಿಂಗಳು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಿಚಾರಣೆಯ ಸಮಯದಲ್ಲಿ ಪದವಿ ಮಾಹಿತಿಯನ್ನು ಬಹಿರಂಗಪಡಿಸಲು ವಿಶ್ವವಿದ್ಯಾಲಯವನ್ನು ಒತ್ತಾಯಿಸಬಾರದು ಎಂದು ವಾದಿಸಿದರು.

ನಮ್ಮ ದೇಶದಲ್ಲಿ ಕಚೇರಿಯನ್ನು ಹೊಂದಿರುವ ವ್ಯಕ್ತಿಯು ಡಾಕ್ಟರೇಟ್ ಅಥವಾ ಅನಕ್ಷರಸ್ಥನಾಗಿದ್ದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇಬ್ಬರೂ ಒಂದೆ. ಅಲ್ಲದೆ, ಈ ವಿಷಯದಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿಲ್ಲ. ಪ್ರಧಾನಿ ಅವರ ಗೌಪ್ಯತೆಗೂ ಸಹ ಇದು ಪರಿಣಾಮ ಬೀರುತ್ತದೆ. ಪ್ರಧಾನ ಮಂತ್ರಿ ಪದವಿಗಳ ಮಾಹಿತಿಯು ಅವರ ಪಾತ್ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲದೆ, ಇನ್ನೊಬ್ಬರ ಬಾಲಿಶ ಅಥವಾ ಬೇಜವಬ್ದಾರಿ ಕುತೂಹಲವನ್ನು ತಣಿಸಲು ನಾವು ಯಾವುದೇ ಮಾಹಿತಿಯನ್ನು ಕೇಳಬಾರದು ಎಂದು ಸರ್ಕಾರದ ಉನ್ನತ ವಕೀಲರಾದ ತುಷಾರ್​ ಮೆಹ್ತಾ ಹೇಳಿದರು.

ಕೇಜ್ರಿವಾಲ್​ ಪರ ವಕೀಲರಾದ ಪರ್ಸಿ ಕವಿನಾ ವಾದ ಮಾಡಿ, ಚುನಾವಣಾ ನಾಮನಿರ್ದೇಶನ ನಮೂನೆಗಳಲ್ಲಿ ಶೈಕ್ಷಣಿಕ ಅರ್ಹತೆಗಳನ್ನು ಪಟ್ಟಿ ಮಾಡಲಾಗಿದೆ. ನಾವು ಪದವಿ ಪ್ರಮಾಣಪತ್ರವನ್ನು ಕೇಳುತ್ತಿದ್ದೇವೆ ಹೊರತು ಅವರ ಅಂಕಪಟ್ಟಿ ಅಲ್ಲ ಎಂದರು.

ಇದೀಗ ಹೈಕೋರ್ಟ್​ ಆದೇಶದ ಬೆನ್ನಲ್ಲೇ ಟ್ವೀಟ್​ ಮಾಡಿರುವ ಕೇಜ್ರಿವಾಲ್​, ನಮ್ಮ ಪ್ರಧಾನಿ ಎಷ್ಟು ವಿದ್ಯಾವಂತರು ಎಂದು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇಲ್ಲವೇ? ನ್ಯಾಯಾಲಯದಲ್ಲಿ ಅವರ ಪದವಿಯನ್ನು ಬಹಿರಂಗಪಡಿಸುವುದನ್ನು ಮೋದಿ ಅವರು ತೀವ್ರವಾಗಿ ವಿರೋಧಿಸಿದ್ದು ಏಕೆ? ಮತ್ತು ಪದವಿಯ ಬಗ್ಗೆ ಮಾಹಿತಿ ಕೇಳಿದ ವ್ಯಕ್ತಿಗೆ ದಂಡ ವಿಧಿಸಲಾಗುತ್ತದೆಯೇ? ಇಲ್ಲಿ ಏನು ನಡೆಯುತ್ತಿದೆ? ಅಶಿಕ್ಷಿತ ಅಥವಾ ಕಡಿಮೆ ಶಿಕ್ಷಣ ಪಡೆದ ಪ್ರಧಾನಿ ದೇಶಕ್ಕೆ ಅಪಾಯಕಾರಿ ಎಂದು ಕೇಜ್ರಿವಾಲ್​ ಟೀಕಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net