

ಬಂಟ್ವಾಳ: ದೇಶದ ಮಾನವ ಸಂಪನ್ಮೂಲ ಹಾಳಾಗಲು ಅಮಲು ಪದಾರ್ಥ ಸೇವನೆಯೊಂದೇ ಸಾಕು, ಬೇರಾವುದೇ ಕ್ಷಿಪಣಿ, ಬಾಂಬ್‌ನ ಅಗತ್ಯವಿಲ್ಲ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಸಹಯೋಗದೊಂದಿಗೆ ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಗಾಂಧಿ ಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ.ಸಿ.ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷ ರೋನಾಲ್ಡ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ಚಿದಾನಂದ ರೈ ಕಕ್ಯ, ಶೌರ್ಯ ವಿಪತ್ತು ತಂಡದ ಕ್ಯಾಪ್ಟನ್ ಪ್ರಕಾಶ್, ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ವಲಯಾಧ್ಯಕ್ಷರಾದ ಮನ್ಮಥ ರಾಜ್ ಜೈನ್, ಪುರುಷೋತ್ತಮ ಸರಪಾಡಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಂದೇಶವನ್ನು ಎಲ್‌ಇಡಿ ಪರದೆಯ ಮೂಲಕ ಪ್ರಸಾರ ಮಾಡಲಾಯಿತು.
ನವಜೀವನ ಸಮಿತಿ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಸ್ವಾಗತಿಸಿದರು. ಪಾಣೆಮಂಗಳೂರು ವಲಯದ ಮೇಲ್ವಿಚಾರಕಿ ಅಮಿತಾ ನಿರೂಪಿಸಿದರು. ವಗ್ಗ ವಲಯದ ಮೇಲ್ವಿಚಾರಕಿ ಸವಿತಾ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.