

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆ ಶ್ರೀ ಧ. ಮಂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸುವರ್ಣ ಸಮ್ಮಿಲನ-ಇದು ಸುವರ್ಣ ಹೆಜ್ಜೆಗಳ ಅವಲೋಕನ ಕಾರ್ಯಕ್ರಮದಲ್ಲಿ ಲಕ್ಷ್ಮೀ ಇಂಡಸ್ಟ್ರೀಸ್ ಮಾಲೀಕ, ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ಮೋಹನ್ ಕುಮಾರ್, ಉಡುಪಿ ಸಮಾಜಸೇವಕ ರವಿ ಕಟಪಾಡಿ ಅವರನ್ನು ಸುವರ್ಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚದುರಿ ಹೋದ ಹಲವಾರು ಬದುಕುಗಳನ್ನು ಪುನರ್‌ನಿರ್ಮಾಣ ಮಾಡುವ ಜತೆ ಹಲವಾರು ಸಮಾಜಮುಖಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ಕುಮಾರ್ ಮಾತನಾಡಿ, ತಮ್ಮ ಮುಂದಾಳತ್ವದಲ್ಲಿ ನಡೆದ ಕೊಳಂಬೆ ಗ್ರಾಮದ ಪುನರುಜ್ಜೀವನದ ಕುರಿತು ಪ್ರಸ್ತಾಪಿಸಿದರು. ಎನ್ನೆಸ್ಸೆಸ್ ಎಂದಿಗೂ ನಮ್ಮ ಸೇವೆಯಲ್ಲಿ ಕೈ ಜೋಡಿಸುತ್ತಾ ಬಂದಿರುವುದು ತುಂಬಾ ಖುಷಿ ತರಿಸುವ ಸಂಗತಿ ಎಂದರು.
ಬಡ ಮಕ್ಕಳ ಬಾಳಿಗೆ ಬೆಳಕಾಗಿ ಹೊಸ ಬಣ್ಣ ತುಂಬುತ್ತಿರುವ ರವಿ ಕಟಪಾಡಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನಿತರ ಸೇವೆಗೆ ಸಂಬಂಧಿಸಿದ ಕೊಳಂಬೆ, ರೈತ ಸಿರಿ ಎಂಬ ಶೀರ್ಷಿಕೆಯನ್ನೊಳಗೊಂಡ ಎರಡು ಸಾಕ್ಷೃಚಿತ್ರ ಪ್ರದರ್ಶಿಸಲಾಯಿತು. ಸುವರ್ಣ ಸಂಭ್ರಮದ ನೆನಪಿಗಾಗಿ ಕಾಲೇಜು ಒಳಾಂಗಣದಲ್ಲಿ ಗಿಡ ನೆಡಲಾಯಿತು.
ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಪ್ರತಾಪ್ ಲಿಂಗಯ್ಯ, ಮಂಗಳೂರು ವಿಶ್ವವಿದ್ಯಾನಿಲಯದ ರಾ.ಸೇ. ಯೋಜನಾ ಸಂಯೋಜಕ ಡಾ.ಶೇಷಪ್ಪ ಉಪಸ್ಥಿತರಿದ್ದರು.
ಕಾಲೇಜು ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್.ಪ್ರಾಸ್ತಾವಿಕ ಮಾತನಾಡಿದರು. ಯೋಜನಾಧಿಕಾರಿ ಪ್ರೊ.ದೀಪ ಆರ್.ಪಿ.ವಂದಿಸಿದರು. ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ನಾಗಣ್ಣ par ಡಿ.ಎ.ನಿರೂಪಿಸಿದರು.
ನಾವು ಅಂದುಕೊಂಡ ಹಾಗೆ ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ. ನಾವು ಬಾಲ್ಯದಲ್ಲಿ ಬಹಳ ಬಡತನದಲ್ಲೇ ಬೆಳೆದದ್ದು. ಆದ್ದರಿಂದಲೇ ನಮ್ಮ ವಿದ್ಯಾಭ್ಯಾಸ ಮೊಟಕುಗೊಂಡಿತು. ಆದರೂ ಯಾವುದೇ ತಪ್ಪು ಹಾದಿ ತುಳಿಯದೇ ಉತ್ತಮ ರೀತಿಯಲ್ಲೇ ದುಡಿದು ಸಮಾಜಸೇವೆ ಮಾಡಬೇಕು ಎಂಬ ಸಂಸ್ಕಾರ ಕಲಿಸಿದ್ದು ನನ್ನ ತಂದೆ ತಾಯಿ. ಜೀವನದಲ್ಲಿ ತಂದೆ ತಾಯಿಗೆ ನೀಡುವ ಗೌರವ ನಮ್ಮ ಗುರುಗಳಿಗೂ ನೀಡಬೇಕು. ರವಿ ಕಟಪಾಡಿ, ಸಮಾಜ ಸೇವಕ
ರವಿ ಕಟಪಾಡಿ, ಸಮಾಜ ಸೇವಕ