ಮುಂಗಾರು ಮಳೆಯೊಂದಿಗೆ ರಾಜ್ಯದಲ್ಲಿ ಹೆಚ್ಚಿದ ಡೆಂಘೆ- ಚಿಕೂನ್‌ಗುನ್ಯಾ

2 Min Read
ಮುಂಗಾರು ಮಳೆಯೊಂದಿಗೆ ರಾಜ್ಯದಲ್ಲಿ ಹೆಚ್ಚಿದ ಡೆಂಘೆ- ಚಿಕೂನ್‌ಗುನ್ಯಾ

ಬೆಂಗಳೂರು: ಮುಂಗಾರು ಮಳೆ ಆರಂಭದೊಂದಿಗೆ ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ತೀವ್ರಗೊಂಡಿದ್ದು, ಕಳೆದ ಒಂದು ತಿಂಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಪ್ರಕರಣಗಳ ಒಟ್ಟು ಸಂಖ್ಯೆ 4,886ಕ್ಕೆ ಏರಿಕೆಯಾಗಿದೆ.

ಮಳೆಯಿಂದಾಗಿ ಹಳ್ಳ ಕೊಳ್ಳಗಳಲ್ಲಿ ನೀರು ನಿಂತು ಈಡಿಸ್ ಸೊಳ್ಳೆಗಳ ಉತ್ಪತ್ತಿ ವ್ಯಾಪಕವಾಗಿದ್ದು, ಡೆಂಘೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಡೆಂಘೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಲಾರ್ವಾ ಪತ್ತೆ ಮತ್ತು ನಾಶ ಸೇರಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 87 ಸಾವಿರಕ್ಕೂ ಅಧಿಕ ಡೆಂಘೆ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, 39 ಸಾವಿರಕ್ಕೂ ಅಧಿಕ ಮಂದಿಯ ರಕ್ತದ ಮಾದರಿ ಪರೀಕ್ಷೆ ನಡೆಸಲಾಗಿದೆ. ಈವರೆಗೂ 4,886 ಪ್ರಕರಣಗಳು ದೃಢಪಟ್ಟಿವೆ. ಕಳೆದ ತಿಂಗಳು ಈ ವೇಳೆ ಒಟ್ಟು 2,877 ಪ್ರಕರಣಗಳು ವರದಿಯಾಗಿದ್ದವು. 2023ರಲ್ಲಿ 16,500ಕ್ಕೂ ಅಧಿಕ ಮಂದಿ ಡೆಂಘೆಯಿಂದ ಬಳಲಿದ್ದು, 9 ಮಂದಿ ಮೃತಪಟ್ಟಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 4,063 ಮಂದಿಯ ರಕ್ತದ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 1,230 ಮಂದಿಯಲ್ಲಿ ಈ ಜ್ವರ ಖಚಿತಪಟ್ಟಿದೆ. ಮೈಸೂರು (377), ಚಿಕ್ಕಮಗಳೂರು (346), ಹಾವೇರಿ (272), ಶಿವಮೊಗ್ಗ (236), ಚಿತ್ರದುರ್ಗ (229), ದಕ್ಷಿಣ ಕನ್ನಡ (211), ಹಾಸನ (171), ವಿಜಯಪುರ (155), ಕಲಬುರಗಿ (153), ತುಮಕೂರು (150) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ದೃಢಪಟ್ಟಿವೆ.

ಡೆಂಘೆ ಹಗಲಿನಲ್ಲಿ ಕಚ್ಚುವ ಈಡಿಸ್ ಜಾತಿಯ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಸೊಳ್ಳೆ ಕಚ್ಚಿದ ನಾಲ್ಕರಿಂದ ಹತ್ತು ದಿನಗಳ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಡೆಂಘೆ ಜ್ವರ ಇದ್ದರೆ ದೇಹದ ತಾಪಮಾನ ವಿಪರೀತವಾಗಿ ಹೆಚ್ಚಾಗುತ್ತದೆ. ರೋಗ ಲಕ್ಷಣಗಳಿಗೆ ಅನುಸಾರ ಚಿಕಿತ್ಸೆ ನೀಡಲಾಗುತ್ತದೆ. ಹಾಗಾಗಿ ನಿರ್ಲಕ್ಷ್ಯ ಮಾಡದೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಇಲಾಖೆ ತಿಳಿಸಿದೆ.

See also  ನಕಲಿ ಜಾತಿಪತ್ರ ಗೋಲ್ಮಾಲ್​ಗೆ ಬ್ರೇಕ್; ಸಿಂಧುತ್ವ ಪ್ರಮಾಣ ಪತ್ರ ನೀಡುವುದಕ್ಕಾಗಿ ಹೊಸ ನಿಯಮ ಜಾರಿ

ಚಿಕೂನ್‌ಗುನ್ಯಾ ಏರಿಕೆ: ರಾಜ್ಯದಲ್ಲಿ 28 ಸಾವಿರಕ್ಕೂ ಅಧಿಕ ಮಂದಿ ಚಿಕೂನ್‌ಗುನ್ಯಾ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 12 ಸಾವಿರಕ್ಕೂ ಅಧಿಕ ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು, 813 ಮಂದಿಯಲ್ಲಿ ಜ್ವರ ದೃಢಪಟ್ಟಿದೆ. ಬಿಬಿಎಂಪಿ (123), ಶಿವಮೊಗ್ಗ (147),ವಿಜಯಪುರ (98) ಹಾಗೂ ಮೈಸೂರು (82) ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

Share This Article