

ಪುತ್ತೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕೆಂಪು ಕಲ್ಲು, ಜಲ್ಲಿ, ಮರಳು ಸಾಗಾಟಕ್ಕೆ ನಿರ್ಬಂಧ ಹೇರಿರುವುದರಿಂದ ಹಲವಾರು ಕೂಲಿ ಕಾರ್ಮಿಕರು ಸಂಕಷ್ಟಕ್ಕೊಳಗಾಗಿದ್ದು, ತಕ್ಷಣ ಈ ಎಲ್ಲ ವ್ಯವಸ್ಥೆಗಳನ್ನು ಹಿಂದಿನಂತೆ ಪುನರಾರಂಭಿಸಬೇಕು ಎಂದು ಆಗ್ರಹಿಸಿ ಕುಂಬ್ರ ವರ್ತಕರ ಸಂಘ ಶುಕ್ರವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಪೆಟ್ರೋಲ್‌ಪಂಪ್, ಹೋಟೆಲ್, ಹಾರ್ಡ್‌ವೇರ್ ಸಹಿತ ಎಲ್ಲ ವರ್ತಕರಿಗೆ ವ್ಯಾಪಾರವಿಲ್ಲದೆ ತೊಂದರೆಗೊಳಗಾಗಿದ್ದು, ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಬಂಧ ಹಿಂಪಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕುಂಬ್ರ ವರ್ತಕರ ಸಂಘ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಸಂಘ ಸ್ಥಾಪಕಾಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಕೋಶಾಧಿಕಾರಿ ರಮೇಶ್ ಆಳ್ವ ಕಲ್ಲಡ್ಕ, ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಶ್ ರೈ ಪರ್ಪುಂಜ, ಸಂಶುದ್ದೀನ್ ಎ.ಆರ್ ಅವರು ಶುಕ್ರವಾರ ನಿಯೋಗದಲ್ಲಿ ತೆರಳಿ ತಹಸೀಲ್ದಾರ್ ನಾಗರಾಜ್ ಅವರನ್ನು ಭೇಟಿಯಾಗಿ, ಅವರ ಮೂಲಕ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮನೆ, ಕಟ್ಟಡ ನಿರ್ಮಾಣಕ್ಕೆ ಸಂಕಷ್ಟ
ಜಿಲ್ಲಾಡಳಿತ, ಪೊಲೀಸ್ ವರಿಷ್ಠಾಧಿಕಾರಿಗಳ ತೀರ್ಮಾನಗಳಿಂದಾಗಿ ಕೆಂಪು ಕಲ್ಲು, ಮರಳು ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ. ಮನೆ, ಕಟ್ಟಡ ನಿರ್ಮಾಣಕ್ಕೆ ಅಸಾಧ್ಯವಾಗಿದೆ. ಲಾರಿ ಪಿಕಪ್ ಚಾಲಕರಿಗೆ ಬಾಡಿಗೆ ಇಲ್ಲ, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲ, ವರ್ತಕರಿಗೆ ವ್ಯಾಪಾರವಿಲ್ಲ. ಕೂಡಲೇ ಈ ಬಗ್ಗೆ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ವರ್ತಕ ಸಂಘದ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದ್ದಾರೆ.