ಬಸ್ ತಂಗುದಾಣ ಅನಾಥ : ಪ್ರಯಾಣಿಕರ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ : ಬೆಳ್ಳಿಬೆಟ್ಟುವಿನಲ್ಲಿ ನಿಲುಗಡೆಗೆ ಆಗ್ರಹ

New Project (23)
Published on

ಧನಂಜಯ ಗುರುಪುರ

ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಜಂಕ್ಷನ್ ಮತ್ತು ಪೊಳಲಿ ದ್ವಾರದ ಮಧ್ಯೆ ಇರುವ ಬೆಳ್ಳಿಬೆಟ್ಟು ಪ್ರಯಾಣಿಕರ ಬಸ್ ತಂಗುದಾಣ ಪ್ರಯಾಣಿಕರ ಸೇವೆಗೆ ‘ಎಟಕು’ವಂತಿಲ್ಲ ಎಂದು ಸಾರ್ವಜನಿಕರ ವಲಯದಿಂದ ಭಾರಿ ಟೀಕೆ ಕೇಳಿ ಬಂದಿವೆ.

ಇಳಿಜಾರು ಗುಡ್ಡ ಪ್ರದೇಶಕ್ಕೆ ಹೊಂದಿಕೊಂಡು ಈ ತಂಗುದಾಣವಿದೆ. ಮಂಗಳೂರಿನಿಂದ ಕೈಕಂಬದತ್ತ ಸಾಗುವ ಬಹುತೇಕ ಬಸ್‌ಗಳು ಈ ತಂಗುದಾಣದಲ್ಲಿ ಪ್ರಯಾಣಿಕರಿಗೆ ಲಭ್ಯವಿಲ್ಲ. ಮಂಗಳೂರು ಕಡೆಗೆ ಸಾಗುವ ಬಸ್‌ಗಳು ತಂಗುತ್ತವೆ. ಸಂಜೆಯಾದರೆ ಕೈಕಂಬದ ಕಡೆಗೆ ಸಾಗುವ ಬಸ್‌ಗಳು ಇಲ್ಲಿ ನಿಲ್ಲುವುದಿಲ್ಲ. ಇದರಿಂದ ನೂಯಿ, ಇಂದಿರಾನಗರ, ಬೆಳ್ಳಿಬೆಟ್ಟು ಮತ್ತಿತರ ಒಳಪ್ರದೇಶದ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದೆ. ರಾತ್ರಿ ಹೊತ್ತು ಬೆಳ್ಳಿಬೆಟ್ಟು ತಂಗುದಾಣದಲ್ಲಿ ನಿಲ್ಲದ ಬಸ್‌ಗಳು ಗುರುಪುರ ಜಂಕ್ಷನ್ ಅಥವಾ ಪೊಳಲಿ ದ್ವಾರದ ಬಳಿ ನಿಲ್ಲುತ್ತವೆ. ಇಲ್ಲಿಂದ ಮುಂದಕ್ಕೆ ಪ್ರಯಾಣಿಕರು ನಡೆದುಕೊಂಡು ಮನೆ ಸೇರಬೇಕಾಗುತ್ತದೆ. ಪ್ರಶ್ನಿಸಿದರೆ ಪ್ರಯೋಜನವಿಲ್ಲ.

ಸಂಪೂರ್ಣ ಪಾಳು: ಸುಮಾರು 10 ವರ್ಷಗಳ ಹಿಂದೆ ಕೃಷ್ಣ ಪಾಲೆಮಾರ್ ಶಾಸಕರಾಗಿದ್ದಾಗ ಬೆಳ್ಳಿಬೆಟ್ಟು ಪ್ರಯಾಣಿಕರ ಬಸ್ ತಂಗುದಾಣ ನಿರ್ಮಾಣವಾಗಿತ್ತು. ನಂತರ ಒಂದರೆಡು ವರ್ಷ ಇದರ ಸದ್ಬಳಕೆಯಾಗಿದೆ. ಈಗ ಸಂಪೂರ್ಣ ಪಾಳುಬಿದ್ದಿದ್ದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ಪ್ರಯಾಣಿಕರಿಗೆ ಕಾಡುವ ತೋಡು: ಹೆದ್ದಾರಿ ಮತ್ತು ಬಸ್ ತಂಗುದಾಣದ ಮಧ್ಯೆ ಆಳ ತೋಡು ಇರುವುದರಿಂದ ಬಸ್ ತಂಗುದಾಣಕ್ಕೆ ಪ್ರವೇಶ ಕಷ್ಟವಾಗಿದೆ. ಮಳೆಗಾಲದಲ್ಲಿ ಪ್ರಯಾಣಿಕರು ಹೆದ್ದಾರಿ ಬದಿಯಲ್ಲೇ ನಿಲ್ಲಬೇಕಾಗುತ್ತದೆ. ಬಸ್‌ಗಳಿಂದ ಇಳಿಯುವವರು ನೇರವಾಗಿ ತೋಡಿಗೆ ಬಿದ್ದು ಗಾಯ ಮಾಡಿಕೊಳ್ಳುವಂತಿದೆ. ತಂಗುದಾಣದ ಸುತ್ತಲೂ ಗಿಡ-ಪೊದೆಗಂಟಿ ಬೆಳೆದಿದ್ದು, ಒಳಗೆ ಪ್ರವೇಶಿಸುವುದು ಅಪಾಯಕಾರಿ. ನಿರ್ವಹಣೆ ಕಾಣದೆ ಕೆಲವು ವರ್ಷ ಸಂದಿದೆ.

ಶೀಘ್ರ ಸ್ಪಂದನೆ ಅಗತ್ಯ: ರಾತ್ರಿ ಹೊತ್ತು ಬೆಳ್ಳಿಬೆಟ್ಟು ಪ್ರಯಾಣಿಕರ ಬಸ್ ತಂಗುದಾಣದಲ್ಲಿ ಬಸ್‌ಗಳಿಗೆ ನಿಲುಗಡೆ ಇಲ್ಲದಿದ್ದರೆ ಈ ಭಾಗದ ಪ್ರಯಾಣಿಕರಿಗೆ ತೀವ್ರ ಸಮಸ್ಯೆ, ಭೀತಿ ತಪ್ಪಿದ್ದಲ್ಲ. ಕೆಲವೊಮ್ಮೆ ಇದು ಅಪರಿಚಿತರ ಆಶ್ರಯ ತಾಣವಾಗಿ ಬಿಡುತ್ತಿದೆ. ಬಸ್ ತಂಗುದಾಣ ಎದುರು ಕೊಳವೆ ಅಳವಡಿಸಿ, ಒಂದಷ್ಟು ದುರಸ್ತಿ ಕಾರ್ಯ ನಡೆಸಿ ಪ್ರಯಾಣಿಕರ ಸೇವೆಗೆ ಅನುಕೂಲ ಮಾಡಿಕೊಡಬೇಕು. ಸ್ಥಳೀಯರ ಜಟಿಲ ಸಮಸ್ಯೆಗೆ ಸಂಬಂಧಪಟ್ಟವರು ಶೀಘ್ರ ಸ್ಪಂದಿಸುವ ಅಗತ್ಯವಿದೆ.

ಹೆದ್ದಾರಿ ಬದಿ ತೋಡಿಗೆ ಕೊಳವೆ ಅಳವಡಿಸಿ ಬಸ್ ಸ್ಟಾೃಂಡ್ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು. ಬಸ್‌ನಿಂದ ಇಳಿಯುವ ಶಾಲಾ ಮಕ್ಕಳು ಮತ್ತು ವಯೋವೃದ್ಧರಿಗೆ ಈ ತೋಡಿನಿಂದ ಅಪಾಯವಿದೆ. ತಕ್ಷಣ ದುರಸ್ತಿ ಮಾಡಬೇಕು. ಅಂತೆಯೇ ಮೇಲ್ಭಾಗದ ಚರಂಡಿ ಮೂರು ಮೋರಿಗಳಲ್ಲಿ ತುಂಬಿರುವ ತ್ಯಾಜ್ಯ ತೆರವುಗೊಳಿಸಿ, ಮಳೆ ನೀರು ಹೆದ್ದಾರಿ ಬದಲಿಗೆ ತೋಡಿನಲ್ಲಿ ಸರಾಗವಾಗಿ ಹರಿಯುವಂತೆ ಮಾಡಬೇಕು. ತನಿಯಪ್ಪ ಪೂಜಾರಿ ಗುರುಪುರ ನಿವೃತ್ತ ಬ್ಯಾಂಕ್ ಅಧಿಕಾರಿ ಬೆಳ್ಳಿಬೆಟ್ಟು ಪ್ರದೇಶದಲ್ಲಿ ನೂರಾರು ಕಾರ್ಮಿಕರು, ಶಾಲಾ ಮಕ್ಕಳು, ಮತ್ತಿತರ ಪ್ರಯಾಣಿಕರು ಇದ್ದರೂ, ಇಲ್ಲಿನ ಬಸ್ ತಂಗುದಾಣದಲ್ಲಿ ಬಹುತೇಕ ಬಸ್‌ಗಳು ನಿಲ್ಲುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ಸಂಜೆಯಾಗುತ್ತಲೇ ಕೆಲವು ಬಸ್‌ನವರು ಬೆಳ್ಳಿಬೆಟ್ಟು ಎಂದು ಟಿಕೆಟ್ ತೆಗೆದರೆ ಗುರುಪುರದಲ್ಲೇ ಇಳಿಸುತ್ತಾರೆ ಅಥವಾ ಪೊಳಲಿ ದ್ವಾರದವರೆಗೆ ಕೊಂಡೊಯ್ಯುತ್ತಾರೆ. ಈ ಸಮಸ್ಯೆಗೆ ಸಂಬಂಧಪಟ್ಟ ಇಲಾಖೆ ಮತ್ತು ಬಸ್ ಸಂಘಟನೆಯವರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಮಹಾಬಲ ಅಮೀನ್ ಅಧ್ಯಕ್ಷ, ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net