'ಸಾರಿ ಲವ್​, ಊಟ ತಿಂದುಬಿಟ್ಟೆ!' ಡೆಲಿವರಿ ಬಾಯ್​ ಕಳುಹಿಸಿದ್ದ ಮೆಸೇಜ್​ ನೋಡಿ ಶಾಕ್​ ಆದ ಯುವತಿ!

food
Published on

ಲಂಡನ್​: ಹೊಟ್ಟೆ ತೀರಾ ಹಸಿದಿರುತ್ತದೆ. ಆನ್​ಲೈನ್​ನಲ್ಲಿ ಊಟ ಆರ್ಡರ್​ ಮಾಡಿ, ಅದು ಬರುವುದಕ್ಕೇ ಕಾಯುತ್ತಾ ಕುಳಿತಿರುತ್ತೀರಿ. ಆಗ ನಿಮ್ಮ ಊಟದ ಡೆಲಿವರಿ ಬಾಯ್​, ಊಟ ತಿಂದು ಮುಗಿಸಿಬಿಟ್ಟೆ ಎಂದು ಸಂದೇಶ ಕಳುಹಿಸಿದರೆ? ಆ ಸ್ಥಿತಿಯನ್ನು ನೆನಪಿಸಿಕೊಂಡರೇ, ಕೋಪ ಉಕ್ಕಿಬರುತ್ತದೆಯಲ್ಲವೇ? ಹೌದು ನಿಜಕ್ಕೂ ಇಂತದ್ದೊಂದು ಘಟನೆ ನಡೆದಿದೆ.

ಲಂಡನ್​ನಲ್ಲಿ ಕಾನೂನು ವಿದ್ಯಾಭ್ಯಾಸ ಮಾಡುತ್ತಿರುವ 21 ವರ್ಷ ಇಲಿ ಇಲಿಯಾಸ್​ ಶನಿವಾರದಂದು ಎರಡು ಬರ್ಗರ್​, ಚಿಕನ್​ ಖಾದ್ಯವನ್ನು ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದಳಂತೆ. ಅದಕ್ಕೆಂದು 20 ಡಾಲರ್​ (1,456 ರೂಪಾಯಿ) ಹಣವನ್ನೂ ಪಾವತಿಸಿದ್ದಳಂತೆ. ಊಟಕ್ಕಾಗಿ ಕಾಯುತ್ತಾ ಕುಳಿತ ಇಲಿಯಾಸ್​ಗೆ ಶಾಕ್​ ಆಗಿದೆ. ಡೆಲಿವರಿ ಬಾಯ್​ನಿಂದ "ಸಾರಿ ಲವ್​, ನಾನು ನಿನ್ನ ಊಟವನ್ನು ತಿಂದು ಮುಗಿಸಿದೆ" ಎನ್ನುವ ಸಂದೇಶ ಬಂದಿದೆ.

ಈ ಸಂದೇಶವನ್ನು ನೋಡಿದ ಆಕೆಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲವಂತೆ. ಮೆಸೇಜಿನ ಸ್ಕ್ರೀನ್​ಶಾಟ್​ ತೆಗೆದು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಆಕೆ, ಡೆಲಿವರಿ ಬಾಯ್​ ಆರೋಗ್ಯವಾಗಿದ್ದಾನೆ ತಾನೇ? ಎಂದು ತಮಾಷೆಯಾಗಿ ಕೇಳಿದ್ದಾಳೆ. ಅದಷ್ಟೇ ಅಲ್ಲ, ಆನ್​ಲೈಡ್​ ಫುಡ್​ ಆರ್ಡರಿಂಗ್​ ಆ್ಯಪ್​ ತೆರೆದಾಗ ಆಕೆಗೆ ಮತ್ತೊಂದು ಶಾಕ್​ ಎದುರಾಗಿದೆ. ನಿಮ್ಮ ಊಟವನ್ನು ಸುರಕ್ಷಿತವಾಗಿ ತಲುಪಿಸಲಾಗಿದೆ. ಡೆಲಿವರಿ ಬಾಯ್​​​ಗೆ ಬೇಕಿದ್ದರೆ ಟಿಪ್ಸ್​ ಕೊಡಿ ಎಂದು ಆ್ಯಪ್​ ಸಂದೇಶ ಕೊಟ್ಟಿದೆ. ಇದನ್ನು ಕಂಡು ಒಂದೆಡೆ ನಗು ಇನ್ನೊಂದೆಡೆ ಕೋಪ ಬಂದ ಯುವತಿ ಫುಡ್​ ಆರ್ಡರಿಂಗ್​​ ಸಂಸ್ಥೆಯನ್ನು ಸಂಪರ್ಕಿಸಿದ್ದಾಳೆ. ಅದಾದ ಮೇಲೆ ಆಕೆಗೆ ಉಚಿತವಾಗಿ ಆಕೆ ಆರ್ಡರ್​ ಮಾಡಿದ್ದ ಊಟವನ್ನು ಕಳುಹಿಸಿಕೊಡಲಾಗಿದೆ.

ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಇಲಿಯಾಸ್​ ಹಂಚಿಕೊಂಡಿದ್ದಾಳೆ. "ಪಾಪ... ಡೆಲಿವರಿ ಬಾಯ್​ಗೆ ನಿಜಕ್ಕೂ ಹಸಿವಾಗಿದ್ದಕ್ಕೆ ಆತ ಹೀಗೆ ಮಾಡಿರಬಹುದು. ನನ್ನಿಂದ ಒಬ್ಬರ ಕೆಲಸ ಹೋಗುವುದು ನನಗೆ ಇಷ್ಟವಿಲ್ಲ. ಅದಕ್ಕಾಗಿ ಆತನ ಬಗ್ಗೆ ಯಾವುದೇ ದೂರು ದಾಖಲಿಸಲಿಲ್ಲ" ಎಂದು ಬರೆದುಕೊಂಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net