ದೆಹಲಿ ಆಸ್ಪತ್ರೆಗಳು ಸ್ಥಳೀಯರಿಗಷ್ಟೇ ಮೀಸಲು; ತಜ್ಞರ ಸಮಿತಿ ಶಿಫಾರಸು; ಅನುಷ್ಠಾನಕ್ಕೆ ಮುಂದಾದ ಸರ್ಕಾರ

LNJP3
Published on

ನವದೆಹಲಿ: ಕರೊನಾದ ಲಘು ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಅಂಥವರಿದ್ದರೂ 24 ತಾಸಿನೊಳಗೆ ಡಿಸ್ಚಾರ್ಜ್​ ಮಾಡಿ ಎಂದು ಆದೇಶ ಹೊರಡಿಸಿದ್ದ ದೆಹಲಿ ಸರ್ಕಾರ, ಈಗ ಮತ್ತೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ.

ದೆಹಲಿಯಲ್ಲಿರುವ ಆಸ್ಪತ್ರೆಗಳನ್ನು ಸ್ಥಳೀಯರ ಚಿಕಿತ್ಸೆಗೆ ಮೀಸಲಾಗಿರಿಸುತ್ತಿದೆ. ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಆರೋಗ್ಯ ಮೂಲ ಸೌಕರ್ಯಗಳನ್ನು ದೆಹಲಿಯವರಿಗೆ ಮೀಸಲಾಗಿಡಬೇಕು ಎಂದು ದೆಹಲಿ ಸರ್ಕಾರ ರೂಪಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಬೇರೆ ರಾಜ್ಯಗಳ ಕೋವಿಡ್​ ರೋಗಿಗಳಿಗೆ ಅವಕಾಶ ನೀಡಿದ್ದೇ ಆದಲ್ಲಿ, ಮೂರೇ ದಿನಗಳಲ್ಲಿ ದೆಹಲಿ ಎಲ್ಲ ಆಸ್ಪತ್ರೆಗಳ ಒಳರೋಗಿ ದಾಖಲು ಸಾಮರ್ಥ್ಯ ಮುಗಿದು ಹೋಗಲಿದೆ ಎಂಬ ಆತಂಕ ವ್ಯಕ್ತಪಡಿಸಿದೆ.

ಇಂದ್ರಪ್ರಸ್ಥ ವಿಶ್ವ ವಿದ್ಯಾಲಯದ ಕುಲಪತಿ ಡಾ. ಮಹೇಶ್​ ವರ್ಮಾ ಈ ಸಮಿತಿಯ ನೇತೃತ್ವ ವಹಿಸಿದ್ದರು. ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಕೇಂದ್ರ ಸಚಿವ ಮುಖ್ತಾರ್​ ಅಬ್ಬಾಸ್​ ನಕ್ವಿ ಈ ಕ್ರಮವನ್ನು ವಿರೋಧಿಸಿದ್ದಾರೆ. ಮುಂಬೈ ಆಸ್ಪತ್ರೆಗಳು ಮುಂಬೈನವರಿಗೆ, ಕೋಲ್ಕತ್ತ ಆಸ್ಪತ್ರೆಗಳು ಕೋಲ್ಕತ್ತದವರಿಗೆ ಎಂದು ಹೇಳಲಾಗುತ್ತದೆಯೇ? ದೆಹಲಿಗೆ ಬರಲು ಪಾಸ್​ಪೋರ್ಟ್​ ವೀಸಾಗಳ ಅಗತ್ಯವಿಲ್ಲ, ದೇಶದ ಎಲ್ಲೆಡೆಯಿಂದ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬೇಕೆಂದು ನಕ್ವಿ ಒತ್ತಾಯಿಸಿದ್ದಾರೆ.

ಸದ್ಯ ದೆಹಲಿಯಲ್ಲಿ 26 ಸಾವಿರಕ್ಕೂ ಅಧಿಕ ಕರೊನಾ ಸೋಂಕಿತರಿದ್ದಾರೆ. 700ಕ್ಕೂ ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು ಬಳಿಕ ಅತಿ ಹೆಚ್ಚು ರೋಗಿಗಳು ದೆಹಲಿಯಲ್ಲಿದ್ದಾರೆ.

ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಲಾಕ್​ಡೌನ್​ ತೆರವು ಮಾಡಲಾಗಿದೆ. ಹೋಟೆಲ್​, ರೆಸ್ಟೋರಂಟ್​, ಮಾಲ್​ ತೆರೆಯಲು ಅವಕಾಶ ನೀಡಲಾಗಿದೆ. ಅಂತರ ರಾಜ್ಯ ಸಂಚಾರಕ್ಕೂ ಗಡಿಯನ್ನು ಮುಕ್ತವಾಗಿಸಲಾಗಿದೆ. ಹೀಗಾಗಿ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net