

ನವದೆಹಲಿ: ಬಿಆರ್‌ಎಸ್ ಮುಖಂಡೆ ಕೆ. ಕವಿತಾಗೆ ಸೋಮವಾರ (ಏಪ್ರಿಲ್ 8) ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಬಿಗ್ ಶಾಕ್ ನೀಡಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕವಿತಾಗೆ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಕವಿತಾ ಅವರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಏಪ್ರಿಲ್ 2 ರಂದು ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಈಗ ಕವಿತಾ ಏಪ್ರಿಲ್ 15ರವರೆಗೆ ಜೈಲಿನಲ್ಲಿ ಇರಬೇಕಾಗುತ್ತದೆ.
ಮಗನ ಪರೀಕ್ಷೆಯನ್ನು ಉಲ್ಲೇಖಿಸಿ ಕವಿತಾ ಮಧ್ಯಂತರ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ವೇಳೆ "ಕೆ. ಕವಿತಾ ಅವರ ಮಗನ ಪರೀಕ್ಷೆ ಏಪ್ರಿಲ್ ತಿಂಗಳಿನಿಂದ ಪ್ರಾರಂಭವಾಗಿವೆ. ಆಕೆಯ 16 ವರ್ಷದ ಮಗನಿಗೆ ಪರೀಕ್ಷೆಯ ಸಮಯದಲ್ಲಿ ತಾಯಿಯ ಬೆಂಬಲ ಬೇಕು. ತಾಯಿಯ ಅನುಪಸ್ಥಿತಿಯನ್ನು ಸಹೋದರ ಅಥವಾ ತಂದೆ ಪೂರೈಸಲು ಸಾಧ್ಯವಿಲ್ಲ, ಹಾಗಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು" ಎಂದು ವಕೀಲರು ವಾದ ಮಂಡಿಸಿದರು.
ಇಡಿ ಪರವಾಗಿ ವಾದ ಮಂಡಿಸಿದ ವಕೀಲ ಜೊಹೆಬ್ ಹುಸೇನ್, "ಕವಿತಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ತನ್ನ ಮೊಬೈಲ್‌ನಲ್ಲಿ ಸಿಕ್ಕಿದ್ದ ಸಾಕ್ಷ್ಯಗಳು ಸೇರಿದಂತೆ ತನ್ನ ವಿರುದ್ಧದ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ಯಶಸ್ಸಿನ ಅಂಚಿನಲ್ಲಿದ್ದು, ಕವಿತಾಗೆ ಮಧ್ಯಂತರ ಜಾಮೀನು ನೀಡುವುದರಿಂದ ತನಿಖೆಗೆ ಅಡ್ಡಿಯಾಗಲಿದೆ" ಎಂದು ಇಡಿ ವಕೀಲರು ಪ್ರತಿಪಾದಿಸಿದ್ದಾರೆ. ಹಾಗೆಯೇ "ಕವಿತಾ ಅವರ ಮಗನ 12 ಪರೀಕ್ಷೆಗಳಲ್ಲಿ 7 ಪರೀಕ್ಷೆಗಳು ಈಗಾಗಲೇ ಮುಗಿದಿವೆ. ಅವನು ಒಬ್ಬಂಟಿಯಲ್ಲ, ಏಕೆಂದರೆ ಅವನ ತಂದೆ ಮತ್ತು ಅಣ್ಣ ಸಹ ಅವರೊಂದಿಗೆ ಇದ್ದಾರೆ" ಎಂದರು.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಮಾರ್ಚ್ 15 ರಂದು ಹೈದರಾಬಾದ್‌ನಿಂದ ಕೆ. ಕವಿತಾರನ್ನು ಬಂಧಿಸಿತು. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಸೌತ್ ಗ್ರೂಪ್‌ನ ಪ್ರಮುಖ ಸದಸ್ಯೆ ಎಂಬ ಆರೋಪವಿದೆ. ಮದ್ಯದ ಪರವಾನಗಿಗಾಗಿ ದೆಹಲಿಯ ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂಪಾಯಿ ಲಂಚ ನೀಡಿದ ಆರೋಪ ಸೌತ್ ಗ್ರೂಪ್ ಮೇಲಿದೆ. ತೆಲಂಗಾಣ ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಮಧ್ಯಂತರ ಜಾಮೀನು ಕೋರಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಇನ್ನೂ ರಿಲೀಫ್ ಸಿಕ್ಕಿಲ್ಲ. ಅವರು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನದಲ್ಲಿರಬೇಕಾಗುತ್ತದೆ.