

ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ಪಟಾಕಿ ಬಳಸಲು ಅವಕಾಶ ನೀಡಿದ್ದಕ್ಕಾಗಿ ದೆಹಲಿ ಮುಖ್ಯಮಂತ್ರಿ ರೇಖಾಗುಪ್ತಾ (Rekha Gupta) ಬುಧವಾರ (ಅ.15) ಸುಪ್ರೀಂ ಕೋರ್ಟ್ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ದೆಹಲಿ ಸರ್ಕಾರದ ವಿಶೇಷ ಕೋರಿಕೆಯ ಮೇರೆಗೆ ರಾಜಧಾನಿಯಲ್ಲಿ ಹಸಿರು ಪಟಾಕಿಗಳನ್ನು ಬಳಸಲು ಅನುಮತಿ ನೀಡಿದಕ್ಕಾಗಿ ಸುಪ್ರೀಂ ಕೋರ್ಟ್ಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಸುಪ್ರೀಂ ಕೋರ್ಟ್ನ ಈ ತೀರ್ಪು ಸಾರ್ವಜನಿಕರ ಭಾವನೆಗಳು ಮತ್ತು ಉತ್ಸಾಹವನ್ನು ಗೌರವಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ ಎಂದು ಗುಪ್ತಾ ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಸರ್ಕಾರವು ಸಾರ್ವಜನಿಕರ ಭಾವನೆಗಳನ್ನು ಗೌರವಿಸುವುದರ ಜೊತೆಗೆ ಸ್ವಚ್ಛ ಮತ್ತು ಹಸಿರು ದೆಹಲಿಯ ಸಂಕಲ್ಪಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಹಬ್ಬಗಳ ಚೈತನ್ಯವು ಉಳಿಯುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಇನ್ನು ದೆಹಲಿಯನ್ನು ಹಸಿರು ಮತ್ತು ಸಮೃದ್ಧವಾಗಿ ಮಾಡಲು ನಾಗರಿಕರು ಮುಂದೆ ಬರಬೇಕು ಎಂದು ಗುಪ್ತಾ ಅಭಿಪ್ರಾಯ ಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ಅಕ್ಟೋಬರ್ 18 ರಿಂದ 21 ರವರೆಗೆ ದೆಹಲಿ-ಎನ್ಸಿಆರ್ನಲ್ಲಿ ಪ್ರಮಾಣೀಕೃತ ಹಸಿರು ಪಟಾಕಿಗಳ ಬಳಕೆಯನ್ನು ಅನುಮತಿಸಿತು. ಇದರಿಂದಾಗಿ ಈ ಹಿಂದೆ ಇದ್ದ 4 ವರ್ಷಗಳ ಪಟಾಕಿ ನಿಷೇಧವನ್ನು ತೆಗೆದುಹಾಕಿದೆ.
ಅಕ್ಟೋಬರ್ 18 ರಿಂದ 21 ರವರೆಗೆ ಬೆಳಿಗ್ಗೆ 6 ಗಂಟೆಯಿಂದ 7 ರವರೆಗೆ ಮತ್ತು ರಾತ್ರಿ 8 ಗಂಟೆಯಿಂದ 10 ರವರೆಗೆ ಈ ಪಟಾಕಿಗಳನ್ನು ಸಿಡಿಸಲು ಕೋರ್ಟ್ ಅನುಮತಿ ನೀಡಿದೆ. ಹಬ್ಬಗಳನ್ನು ಆಚರಿಸುವುದು ಮತ್ತು ಪರಿಸರವನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶ ಎಂದು ಸುಪ್ರೀಂ ಕೋರ್ಟ್ ಹೇಳಿದೆ. (ಏಜೆನ್ಸೀಸ್)