

ನವದೆಹಲಿ: ತೀವ್ರವಾಗಿ ಹರಡುತ್ತಿರುವ ಕರೊನಾ ವೈರಸ್ ಸೋಂಕು ತಡೆಗಟ್ಟಲು ದೆಹಲಿ ಸರ್ಕಾರ 5 ಮಂದಿಗಿಂತ ಜನ ಹೆಚ್ಚು ಸೇರದಂತೆ ನಿಷೇಧಾಜ್ಞೆ ಜಾರಿಗೊಳಿಸಿದೆ.
ದೆಹಲಿಯಲ್ಲಿ 19 ಮಂದಿಗೆ ಸೋಂಕು ಹರಡಿದೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಸೋಂಕು 3ನೇ ಹಂತ ತಲುಪದಂತೆ ಮಾಡಲು ಕೆಲವು ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು ಹೀಗಾಗಿ ಹೆಚ್ಚು ಜನ ಒಂದು ಕಡೆ ಸೇರದಂತೆ ಆಜ್ಞೆ ಹೊರಡಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
ಸೋಂಕು ಹರಡುವುದನ್ನು ತಡೆಯಲು ಈಗಾಗಲೇ ಸರ್ಕಾರ ಶಾಲೆ, ಕಾಲೇಜು, ಚಿತ್ರಮಂದಿರ, ಮಾಲ್, ರೆಸ್ಟೋರೆಂಟ್ಗಳನ್ನು ಮುಚ್ಚಿದೆ. ಸೋಂಕು ಹರಡುವುದು ಕಡಿಮೆಯಾಗದಿದ್ದರೇ ಇಡೀ ದೆಹಲಿಯ ಚಟುವಟಿಕೆಯನ್ನು ಸ್ತಬ್ಧಗೊಳಿಸಬೇಕಾಗುತ್ತದೆ ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.
ಅಗತ್ಯ ಸೇವೆ ಹೊರತುಪಡಿಸಿ ಇತರೆ ಎಲ್ಲ ಸೇವೆಗಳ ಉದ್ಯೋಗಿಗಳಿಗೆ ರಜೆ ಘೋಷಿಸಲಾಗಿದೆ. ಮನೆಯಿಂದಲೇ ಕೆಲಸ ಮಾಡುವಂತೆ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಪತ್ರಕರ್ತರು ಕೂಡ ಮನೆಯಿಂದಲೇ ಕೆಲಸ ಮಾಡಬೇಕು. ಇನ್ನು ಮುಂದೆ ಎಲ್ಲ ಸುದ್ದಿಗೋಷ್ಠಿಗಳು ಆನ್ಲೈನ್ನಲ್ಲೇ ನಡೆಯುತ್ತವೆ. ದಿನಗೂಲಿ ನೌಕರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಶೇ.50 ರಿಯಾಯಿತಿ ದರದಲ್ಲಿ ಪಡಿತರ ನೀಡುವಂತೆ ಸೂಚಿಸಲಾಗಿದೆ. ಅಂಗವಿಕಲರು, ವೃದ್ಧರು ಹಾಗೂ ವಿಧವೆಯರ ಪಿಂಚಣಿಯನ್ನು ದ್ವಿಗುಣಗೊಳಿಸಲಾಗುವುದು ಎಂದು ಅವರು ಸೂಚಿಸಿದರು. (ಏಜೆನ್ಸೀಸ್)