

ನವದೆಹಲಿ: ಬೀದಿ ನಾಯಿಗಳನ್ನು ರಕ್ಷಿಸಲು ಹೋದ ಪ್ರಾಣಿ ರಕ್ಷಣಾ ಎನ್ಜಿಒ ಸದಸ್ಯರಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ರಾಣಿಬಾಗ್ನಲ್ಲಿ ನಡೆದಿದೆ.
ನೇಬರ್ಹುಡ್ ವೂಫ್ ಎಂಬ ಪ್ರಾಣಿ ರಕ್ಷಣಾ ಎನ್ಜಿಒದ ಮುಖ್ಯಸ್ಥೆ ಆಯೆಷಾ ಕ್ರಿಸ್ಟಿನಾ ಅವರು ತೀವ್ರ ಹಲ್ಲೆಗೆ ಒಳಗಾಗಿದ್ದಾರೆ. ಅವರ ಮೈಯಿಂದ ರಕ್ತ ಸುರಿಯುತ್ತಿದ್ದು, ಅದೇ ಸ್ಥಿತಿಯಲ್ಲಿಯೇ ವಿಡಿಯೋ ಮಾಡಿ, ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ಆಜಾದ್ಪುರ ಠಾಣೆಗೆ ದೂರು ನೀಡಲು ತೆರಳಿದ್ದ ಆಯೆಷಾ, ಅಲ್ಲಿಯೇ ನಿಂತು ವಿಡಿಯೋ ಮಾಡಿದ್ದು, ನಾವು ಬೇರೇನೂ ಮಾಡಲಿಲ್ಲ. ಜು.3ರಂದು ರಾತ್ರಿ 10.30ರ ಹೊತ್ತಿಗೆ ಬೀದಿ ನಾಯಿಗಳನ್ನು ಹಿಡಿದು, ರಕ್ಷಿಸಲು ಹೋಗಿದ್ದೆವು. ಅದೇ ಸಮಯದಲ್ಲಿ ಸ್ಥಳೀಯರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರನ್ನು ಸುತ್ತುವರೆದು, ನಮಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಕೆಟ್ಟ ಪದಗಳನ್ನು ಪ್ರಯೋಗ ಮಾಡಿ ಬೈದಿದ್ದಾರೆ. ಇದು ಮೊದಲಲ್ಲ. ಈ ಹಿಂದೆಯೂ ಕೂಡ ಹಲವು ಬಾರಿ ಇಂಥದ್ದೇ ಕೆಟ್ಟ ಅನುಭವ ಆಗಿದೆ. ಆದರೆ ಸುಮ್ಮನೆ ಇದ್ದೆವು. ಆದರೆ ಈ ಸಲ ರಕ್ತ ಬರುವಂತೆ ಹೊಡೆದಿದ್ದಾರೆ. ಬರೀ ನನಗಷ್ಟೇ ಅಲ್ಲ, ನನ್ನ ಸಹೋದ್ಯೋಗಿಗಳಾದ ವಿಪಿನ್, ಅಭಿಷೇಕ್, ದೀಪಕ್ ಎಂಬುವರ ಮೇಲೆ ಕೂಡ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿಯವರ ಸಂಬಂಧಿಯ ಹತ್ಯೆ; ಕಾಬೂಲ್ನಲ್ಲಿ ಕಟ್ಟೆಚ್ಚರ
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಅವರು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ಅಮಾನವೀಯ ಘಟನೆ, ಮೂಕ ಜೀವಿಗಳ ರಕ್ಷಣೆಗಾಗಿ ದುಡಿಯುತ್ತಿರುವವರ ಮೇಲೆ ಹೀಗೆ ಹಲ್ಲೆ ನಡೆಸಿದ್ದು ಖಂಡನೀಯ. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ದೆಹಲಿ ಪೊಲೀಸರೂ ಕೂಡ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)