

ಕಾಬೂಲ್: ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಅವರ ಹತ್ತಿರದ ಸಂಬಂಧಿಯೋರ್ವರನ್ನು ಇಂದು ಗುಂಡು ಹಾರಿಸಿ ಹತ್ಯೆಗೈಯಲಾಗಿದೆ.
ಕಾಬೂಲ್ನಲ್ಲಿರುವ ಅವರ ಮನೆಯಲ್ಲಿ ಘನಿ ಮೃತದೇಹ ಪತ್ತೆಯಾಗಿದೆ. ಮೈಮೇಲೆ ಗುಂಡು ಹೊಕ್ಕ ಗಾಯಗಳೂ ಉಂಟಾಗಿವೆ ಎಂದು ಕಾಬೂಲ್ ಪೊಲೀಸರು ತಿಳಿಸಿದ್ದಾರೆ ಎಂದು ಆಫ್ಘಾನ್ ಮಾಧ್ಯಮಗಳು ವರದಿ ಮಾಡಿವೆ.
ಇದು ತಾಲಿಬಾನ್ ಉಗ್ರರ ಕೈವಾಡ ಇರಬಹುದಾ ಎಂಬ ಅನುಮಾನವೂ ಕಾಡುತ್ತಿದೆ. ಈ ಬಾರಿಯ ಫೆಬ್ರವರಿಯಲ್ಲಿ ಅಮೆರಿಕ ಮತ್ತು ಅಫ್ಘಾನಿಸ್ತಾನ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಒಪ್ಪಂದದ ಮೂಲಕ ಎರಡು ದಶಕಗಳ ಸಮರಕ್ಕೆ ತೆರೆ ಎಳೆಯಲಾಗಿತ್ತು. ಒಪ್ಪಂದದ ನಿಯಮದಂತೆ ಅಫ್ಘಾನ್ ನೆಲದಲ್ಲಿ ತಾಲಿಬಾನ್ ಉಗ್ರರ ತರಬೇತಿಗೆ ಅವಕಾಶ ನೀಡುವುದಿಲ್ಲ ಎಂದು ಅಫ್ಘಾನಿಸ್ತಾನ ಸರ್ಕಾರ ಹೇಳಿತ್ತು. ಆದರೆ ಅಮೆರಿಕ-ಅಫ್ಘಾನಿಸ್ತಾನ ನಡುವೆ ಈ ಒಪ್ಪಂದ ಆಗುತ್ತಿದ್ದಂತೆ ತಾಲಿಬಾನ್ ಉಗ್ರರಿಂದ ಬೆದರಿಕೆ ಶುರುವಾಗಿತ್ತು. ಅಲ್ಲದೆ ದಾಳಿಯನ್ನೂ ಮಾಡಿತು. ದೇಶದ ಮಿಲಿಟರಿ ಪಡೆಗಳ ಮೇಲೆಯೂ ಆಕ್ರಮಣ ಮಾಡುವುದಾಗಿ ಘೋಷಿಸಿತ್ತು.
ಇದೀಗ ಅಧ್ಯಕ್ಷರ ಹತ್ತಿರದ ಸಂಬಂಧಿ ಗುಂಡೇಟಿಗೆ ಬಲಿಯಾಗಿದ್ದು, ಆಫ್ಘಾನ್ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ. (ಏಜೆನ್ಸೀಸ್)