

ನವದೆಹಲಿ: ಕರೊನಾ ವೈರಸ್ ಭಾರತದಲ್ಲಿ ಗಂಭೀರ ಸ್ವರೂಪ ತಾಳುತ್ತಿದೆ. ಸದ್ಯಕ್ಕೆ ಯಾವ ಲಸಿಕೆ, ಔಷಧಿಗಳೂ ಇಲ್ಲದ ಕಾರಣ ಸಾಮಾಜಿಕ ಅಂತರವೊಂದೇ ನಮ್ಮ ಎದುರು ಇರುವ ನಿಯಂತ್ರಣಾ ಮಾರ್ಗ.
ಇಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲ ಮಾರ್ಗದ ಪ್ರಯಾಣಗಳೂ ಬಂದ್ ಆಗಿವೆ. ಅನಿವಾರ್ಯ ಇದ್ದ ಹೊರತು ಜನರು ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ಇಂದಿನಿಂದ ಅಂತಾರಾಷ್ಟ್ರೀಯ ವಿಮಾನಗಳು ಭಾರತವನ್ನು ಪ್ರವೇಶಿಸುವಂತಿಲ್ಲ. ಹಾಗೇ ದೇಶೀಯ ವಿಮಾನಗಳ ಸಂಚಾರ ಸಮಯಗಳಲ್ಲೂ ಏರುಪೇರಾಗುತ್ತಿದೆ.
ಹೀಗಿರವಾಗ ಬೇರೆಬೇರೆ ದೇಶಗಳಿಂದ, ದೇಶದೊಳಗಿನ ಸ್ಥಳಗಳಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ತಾವು ಹೋಗಬೇಕಾದ ಕಡೆಗೆ ತೆರಳಲು ವಿಮಾನ ಇಲ್ಲದೆ ಕಾಯುತ್ತ ಕುಳಿತಿದ್ದ ಪ್ರಯಾಣಿಕರಿಗೆ ದೆಹಲಿ ಏರ್ಪೋರ್ಟ್ ಸಿಬ್ಬಂದಿ ಆಹಾರ ಮತ್ತು ಮಾಸ್ಕ್ಗಳನ್ನು ನೀಡಿದ್ದಾರೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಆಹಾರ, ಮಾಸ್ಕ್ ಸೇರಿ ಇನ್ನುಳಿದಂತೆ ಅಗತ್ಯ ಇರುವ ಎಲ್ಲ ವಸ್ತುಗಳನ್ನೂ ವಿಮಾನ ನಿಲ್ದಾಣದ ಸಿಬ್ಬಂದಿ ಒದಗಿಸಿದ್ದಾರೆ. ಏರ್ಪೋರ್ಟ್ ಸಿಬ್ಬಂದಿಯ ಈ ಸಹಾಯಕ್ಕೆ ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಪ್ರಯಾಣಿಕರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿರುವ ಫೋಟೋಗಳನ್ನು ಹಾಗೂ ಅದಕ್ಕೆ ಪ್ರತಿಯಾಗಿ ಪ್ರಯಾಣಿಕರು ಸಂತೋಷದಿಂದ ಚಪ್ಪಾಳೆ ತಟ್ಟುವ ವಿಡಿಯೋವನ್ನು ದೆಹಲಿ ಏರ್ಪೋರ್ಟ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಹಾಗೇ ನಾವು ಪ್ರಯಾಣಿಕರು ಆರಾಮವಾಗಿ ಇರಲು ಎಲ್ಲ ರೀತಿಯ ಸಹಕಾರವನ್ನೂ ನೀಡುತ್ತೇವೆ ಎಂದು ಹೇಳಿದ್ದಾರೆ.
ಏರ್ಪೋರ್ಟ್ ಸಿಬ್ಬಂದಿ ಯಾಂತ್ರಿಕವಾಗಿ ಕೆಲಸ ಮಾಡದೆ, ಹೀಗೆ ವೈಯಕ್ತಿಕವಾಗಿ ಪ್ರಯಾಣಿಕರಿಗೆ ಸ್ಪಂದಿಸುತ್ತಿರುವುದು ತುಂಬ ಖುಷಿಯ ಸಂಗತಿ ಎಂದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಕರೊನಾ ಭೀತಿಯಿದ್ದರೂ ನಗುಮೊಗದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳುತ್ತಿದ್ದಾರೆ.(ಏಜೆನ್ಸೀಸ್)