ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ನಡೆದ ಛಾವಣಿಯ ಒಂದು ಭಾಗ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಆರು ಮಂದಿಗೆ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಹೆಚ್ಚುವರಿ ಡಿಸಿಎಂ ಹುದ್ದೆ: ಹೈಕಮಾಂಡ್ ಬಳಿ ಹೋಗಿ ಮಾತನಾಡಲಿ ಎಂದ ಡಿ.ಕೆ.ಶಿವಕುಮಾರ್
ದೆಹಲಿ ವಿಮಾನ ನಿಲ್ದಾಣ ಮತ್ತು ದೇಶಾದ್ಯಂತ ಅಂತಹ ರಚನೆಗಳನ್ನು ಹೊಂದಿರುವ ಇತರ ವಿಮಾನ ನಿಲ್ದಾಣಗಳಲ್ಲಿನ ರಚನೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಘಟನೆಯ ತಾಂತ್ರಿಕ ಕಾರಣಗಳು ಮತ್ತು ಇತರ ಅಂಶಗಳು ತನಿಖೆಯ ನಂತರ ತಿಳಿಯುತ್ತದೆ. ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 20 ಲಕ್ಷ ರೂ. ಅಲ್ಲದೇ ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೊಷಿಸಿದರು.
ನಾನು ಏಮ್ಸ್‌ನಲ್ಲಿ ದಾಖಲಾಗಿರುವ ಗಾಯಾಳುಗಳನ್ನೂ ಭೇಟಿ ಮಾಡಿದ್ದೇನೆ. ಅಂತಹ ಬಿಕ್ಕಟ್ಟು ಸಂಭವಿಸಿದಾಗಲೆಲ್ಲಾ ನಾವು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ ಮತ್ತು ಸಹಜ ಸ್ಥಿತಿಗೆ ಮರಳಿದ್ದೇವೆ ಎಂಬುದು ಸರ್ಕಾರದ ಬದ್ಧತೆಯಾಗಿದೆ. ಟರ್ಮಿನಲ್ 1 ನಲ್ಲಿ ನಡೆದ ಘಟನೆ ದುರದೃಷ್ಟಕರ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ ಸಚಿವರು.
28 ವಿಮಾನಗಳ ಸಂಚಾರ ರದ್ದು: ಘಟನೆಯಿಂದಾಗಿ ದೆಹಲಿಯ ಟರ್ಮಿನಲ್ ಒಂದರ 28 ವಿಮಾನಗಳ ಸಂಚಾರ ರದ್ದಾಗಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ಬರುವ 12, ಹೊರಡುವ 16 ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. ಟರ್ಮಿನಲ್- 2 ಮತ್ತು 3 ರಲ್ಲಿ ಎಂದಿನಂತೆ ವಿಮಾನಗಳ ಸಂಚಾರ ಮುಂದುವರಿಕೆಯಾಗಿದೆ.
ಕುಸಿದಿರುವ ಛಾವಣಿ ಭಾಗವನ್ನು 2009 ರಲ್ಲಿ ನಿರ್ಮಿಸಲಾಗಿದೆ. ಈ ವರ್ಷದ ಮಾರ್ಚ್ ನಲ್ಲಿ ನವೀಕರಣ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ನವೀಕರಣಗೊಂಡ ಟರ್ಮಿನಲ್ ಉದ್ಘಾಟಿಸಿದ್ದರು. ಇದಾದ ಮೂರೇ ತಿಂಗಳಿಗೆ ಮೊದಲ ಮಳೆಗೆ ಛಾವಣಿ ಕುಸಿದು ಬಿದ್ದಿದೆ.