

ಶಶಿ ಕುತ್ಯಾಳ, ಈಶ್ವರಮಂಗಲ
ತುಳುನಾಡಿನ ಅವಳಿ ವೀರ ಪುರುಷರೆಂದೇ ಐತಿಹಾಸಿಕ ಹಿನ್ನೆಲೆಯಿರುವ ಕೋಟಿ-ಚೆನ್ನಯರ ತಾಯಿ ದೇಯಿ ಬೈದೆತಿ ಅಸಾಮಾನ್ಯ ನಾಟಿ ವೈದ್ಯೆಯಾಗಿದ್ದರು. ಅವರ ಹೆಸರಿನಲ್ಲಿ 6 ವರ್ಷದ ಹಿಂದೆ ಪುತ್ತೂರು ತಾಲೂಕಿನ ಪಡುಮಲೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದ ಔಷಧೀಯ ಗುಣವುಳ್ಳ ಹಲವು ವಿಧದ ಗಿಡ-ಮರಗಳಿರುವ ‘ದೇಯಿಬೈದೆತಿ ಔಷಧ ವನ’ ಸುಂದರವಾಗಿ ರೂಪುಗೊಂಡಿದ್ದು, ಮತ್ತೆ ಮುಕ್ತವಾಗಿ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಂಡಿದೆ.
ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದ ವೇಳೆ ಅರಣ್ಯ ಸಚಿವರಾಗಿದ್ದ ಬಿ.ರಮಾನಾಥ ರೈ ಅವರ ಮುತುವರ್ಜಿಯಲ್ಲಿ ದೇಯಿ ಬೈದೆತಿ ಔಷಧವನವನ್ನು ಅರಣ್ಯ ಇಲಾಖೆ ನಿರ್ಮಿಸಿತ್ತು. 2015ರಲ್ಲಿ ಔಷಧವನ ನಿರ್ಮಾಣ ಆರಂಭಿಸಿ 2018ರಲ್ಲಿ ಪೂರ್ಣಗೊಳಿಸಲಾಗಿತ್ತು. ಬಡಗನ್ನೂರು ಗ್ರಾಮದ ಮುಡ್ಪಿನಡ್ಕ ಮತ್ತು ಪಟ್ಟೆ ನಡುವಣ ಭಾಗದಲ್ಲಿ ಕೌಡಿಚ್ಚಾರು-ಸುಳ್ಯಪದವು ರಸ್ತೆಯ ಪಕ್ಕದಲ್ಲೇ ಈ ಔಷಧ ವನವಿದೆ. 5 ಎಕರೆಗೂ ಅಧಿಕ ಸರ್ಕಾರಿ ಜಾಗವನ್ನು ಬಳಸಿಕೊಂಡು ಔಷಧೀಯ ಗುಣಗಳಿರುವ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುತ್ತಾ ಬರಲಾಗಿದ್ದು, ಇದೀಗ ಎಲ್ಲ ಗಿಡಗಳು ಸುಂದರವಾಗಿ ಬೆಳೆದು ಕಂಗೊಳಿಸುತ್ತಿವೆ.
ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿರುವ ಸ್ಥಳೀಯ ಹಾಗೂ ಅತ್ಯಂತ ಅಪರೂಪದ ಸಸಿಗಳು ಇಲ್ಲಿವೆ. 200ರಷ್ಟು ಮರಗಳಿವೆ. ರುದ್ರಾಕ್ಷಿ, ಬೂರಗ, ಕದಂಬ, ಆಡುಸೋಗೆ, ಲೋಳೆಸರ, ಬಿಳಿದಾಸವಾಳ, ತುಳಸಿ, ಸೀತಾಅಶೋಕ, ಕಾಡು ದಾಲ್ಚಿನಿ, ನೆಲ್ಲಿ, ಬೇಂಗ, ಬಂಟಕೇಪುಳ, ಬಲೀಂದ್ರಪಾಲೆ, ದೊಡ್ಡಗೊಚ್ಚಲು, ನೇರಳೆ, ಬಿದಿಲ ಸೇರಿದಂತೆ 500ಕ್ಕೂ ಮಿಕ್ಕಿದ ಔಷಧೀಯ ಗುಣವುಳ್ಳ ಮರ-ಗಿಡಗಳು ಬೆಳೆದು ನಿಂತಿವೆ. ಔಷಧೀಯ ವನದಲ್ಲಿರುವ ಎಲ್ಲ್ಲ ಗಿಡಗಳ ವಿವರಗಳನ್ನು, ಅವುಗಳ ಔಷಧೀಯ ಗುಣಗಳನ್ನು ಪಕ್ಕದಲ್ಲಿಯೇ ಅಳವಡಿಸಿರುವ ಫಲಕದಲ್ಲಿ ನಮೂದಿಸಲಾಗಿದೆ. ಅಲ್ಲದೆ ವ್ಯಕ್ತಿಯ ಜಾತಕ ನಕ್ಷತ್ರಕ್ಕೆ ಅನುಗುಣವಾಗಿ ಯಾವ ಗಿಡಗಳನ್ನು ಮನೆಯಲ್ಲಿ ನೆಡಬಹುದು ಎನ್ನುವ ಮಾಹಿತಿಯೂ ಔಷಧೀಯ ವನದಲ್ಲಿದೆ.ಸುಂದರ ಪ್ರವೇಶದ್ವಾರವೂ ಇದೆ.
ಉದ್ಯಾನವನ ನಿರ್ಮಾಣದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿ ತೆರೆದುಕೊಂಡಿತ್ತು. ಆದರೆ ನಾಲ್ಕು ವರ್ಷಗಳ ಹಿಂದೆ ಯುವಕನೊಬ್ಬ ಔಷಧೀಯ ವನದಲ್ಲಿರುವ ದೇಯಿ ಬೈದೆತಿ ವಿಗ್ರಹದ ಪಕ್ಕದಲ್ಲಿ ನಿಂತು ಅನುಚಿತವಾಗಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನ್ನೆಲೆಯಲ್ಲಿ ವನಕ್ಕೆ ಸಾರ್ವಜನಿಕರ ಭೇಟಿ ನಿರ್ಬಂಧಿಸಲಾಗಿತ್ತು. ಈಗ ಔಷಧವನದಲ್ಲಿರುವ ಕುಟೀರ ಹಾಗೂ ದೇಯಿ ಬೈದೆತಿ ವಿಗ್ರಹವಿರುವ ಭಾಗಕ್ಕೆ ಸಂಪೂರ್ಣ ತಂತಿ ಬೇಲಿ ಅಳವಡಿಸಿ ಅದರೊಳಗೆ ಯಾರೂ ಪ್ರವೇಶಿಸದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜಿಸಿದ್ದು, ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ರಾಜ್ಯದ ಎಲ್ಲಿಯೂ ಇಂತಹ ಔಷಧೀಯ ವನವಿಲ್ಲ. ಔಷಧ ಗುಣವುಳ್ಳ ಬಹಳಷ್ಟು ಗಿಡಮೂಲಿಕೆಗಳು ಇಲ್ಲಿವೆ. ಆದರೆ ನೌಕರರಿದ್ದ ಸಂದರ್ಭ ಮಾತ್ರ ವೀಕ್ಷಣೆಗೆ ಅವಕಾಶ ಸಿಗುತ್ತಿದ್ದು,ಅವರು ಹೋಗುವಾಗ ಗೇಟ್ ಹಾಕಿ ಹೋಗುತ್ತಾರೆ. ಹಾಗಾಗಿ ವೀಕ್ಷಣೆಗೆ ಸ್ವಲ್ಪ ಸಮಸ್ಯೆಯಾಗಿದೆ. ಇನ್ನೂ ಖಾಲಿ ಜಾಗ ಇರುವುದರಿಂದ ಇನ್ನಷ್ಟು ಔಷಧೀಯ ಗಿಡಗಳನ್ನು ನೆಟ್ಟು ವನ ಅಭಿವೃದ್ಧಿಪಡಿಸಬೇಕು. - ಲಿಂಗಪ್ಪ ಗೌಡ ಮೋಡಿಕೆ, ಬಡಗನ್ನೂರು ಗ್ರಾ.ಪಂ ಸದಸ್ಯ
ವನದಲ್ಲಿ ಔಷಧೀಯ ಗುಣಗಳುಳ್ಳ 200ರಷ್ಟು ಮರಗಳು ಹಾಗೂ ಸ್ಥಳೀಯ ಗಿಡಗಳು ಸೇರಿ ಹಲವಾರು ಔಷಧೀಯ ಗಿಡಗಳಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಶಾಲಾ ಮಕ್ಕಳು ಬಂದು ಔಷಧೀಯ ವನ ವೀಕ್ಷಣೆ ಮಾಡಿ ಹೋಗುತ್ತಿದ್ದಾರೆ. ಸಾರ್ವಜನಿಕರು ಬಂದು ಗಿಡಗಳ ಮಾಹಿತಿ ಪಡೆದುಕೊಳ್ಳಬಹುದು. - ಕಿರಣ್ ಬಿ.ಎಂ, ಪುತ್ತೂರು ವಲಯಾರಣ್ಯಾಧಿಕಾರಿ ದೇಯಿ ಬೈದೆತಿ ಔಷಧ ವನಲ್ಲಿರುವ ದೇಯಿ ಬೈದೆತಿ ವಿಗ್ರಹ-ಕುಟೀರ.