3 ತಿಂಗಳಲ್ಲಿ 3928 ಆಧಾರ್ ನವೀಕರಣ: ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಮಾಹಿತಿ

adhar
ಜಿಲ್ಲಾಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯಲ್ಲಿ ಯೋಜನೆ ವ್ಯವಸ್ಥಾಪಕ ಟಿ.ಶಿವನ್ ಮಾತನಾಡಿದರು. ಎಡಿಎಂ ಕೆ.ವಿ.ಶ್ರುತಿ, ಕಂದಾಯ ವಸೂಲಿ ತಹಸೀಲ್ದಾರ್ ಕೆ.ವಿ.ಶಶಿಕುಮಾರ್, ಐಟಿ ಮಿಷನ್ ಡಿಪಿಎಂ ಕಪಿಲದೇವ್ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ 3928 ಆಧಾರ್ ಕಾರ್ಡ್‌ಗಳನ್ನು ನವೀಕರಿಸಲಾಗಿದೆ ಎಂದು ಜಿಲ್ಲಾಮಟ್ಟದ ಆಧಾರ್ ಮೇಲ್ವಿಚಾರಣಾ ಸಮಿತಿ ತಿಳಿಸಿದೆ. ಏಪ್ರಿಲ್‌ನಲ್ಲಿ 1361, ಮೇನಲ್ಲಿ 1081 ಮತ್ತು ಜೂನ್‌ನಲ್ಲಿ 1486 ಆಧಾರ್‌ಗಳನ್ನು ನವೀಕರಿಸಲಾಗಿದೆ. ಆಧಾರ್‌ನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಯಾರಾದರೂ ತಮ್ಮ ಆಧಾರ್ ವಿವರಗಳನ್ನು ಒಟಿಪಿ ಬಳಸಿಕೊಂಡು ಸೆ.14ರ ವರೆಗೆ ಉಚಿತವಾಗಿ ನವೀಕರಿಸಬಹುದು. ಐದು ವರ್ಷಕ್ಕಿಂತ ಮೇಲ್ಪಟ್ಟ 95,584 ಮಕ್ಕಳು ಆಧಾರ್ ನೋಂದಣಿ ನಡೆಸಿದ್ದು, 15 ವರ್ಷ ಮೇಲ್ಪಟ್ಟ 50,858 ವಿದ್ಯಾರ್ಥಿಗಳ ಆಧಾರ್ ನವೀಕರಣವೂ ಆಗಬೇಕಿದೆ ಎಂದು ಮಾಹಿತಿ ನೀಡಿದೆ.

15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳ ಆಧಾರ್ ನವೀಕರಣಕ್ಕೆ ವಿಶೇಷ ಶಿಬಿರ ಆಯೋಜಿಸಲಾಗುವುದು. ಆಧಾರ್‌ಗಳನ್ನು ನವೀಕರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೆ.3 ರೊಳಗೆ ಐಟಿ ಮಿಷನ್ ಶಿಬಿರಗಳನ್ನು ನಡೆಸಲಾಗುವುದು. ಜಿಲ್ಲೆಯ 20 ತೃತೀಯ ಲಿಂಗಿಗಳು ಆಧಾರ್ ನವೀಕರಣ ಮಾಡಬೇಕಾಗಿದೆ. ಅವುಗಳನ್ನು ನವೀಕರಿಸಲು ಸಾಮಾಜಿಕ ನ್ಯಾಯ ಇಲಾಖೆಯ ಸಹಯೋಗದಲ್ಲಿ ಐಟಿ ಮಿಷನ್ ಶಿಬಿರವನ್ನು ನಡೆಸಲಿದೆ. ಜಿಲ್ಲೆಯಲ್ಲಿ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವ ಆರೈಕೆ ಕೇಂದ್ರಗಳ ಕೈದಿಗಳ ಆಧಾರ್ ನವೀಕರಣವನ್ನು ಸಹ ಪೂರ್ಣಗೊಳಿಸಲಾಗುವುದು.

60 ವರ್ಷ ಮೇಲ್ಪಟ್ಟವರ ಮತ್ತು ಹಾಸಿಗೆ ಹಿಡಿದಿರುವ ರೋಗಿಗಳ ಆಧಾರ್ ನವೀಕರಿಸಲು ಫಲಾನುಭವಿಗಳ ಮನೆ ಸಮೀಪದ ಅಕ್ಷಯ ಕೇಂದ್ರದ ಕಾರ್ಯಕರ್ತರು ಮನೆಗೆ ತೆರಳಲಿದ್ದಾರೆ. ಈ ಉದ್ದೇಶಕ್ಕಾಗಿ ಹೋಮ್ ಆಧಾರ್ ಅರ್ಹತೆ ಸೌಲಭ್ಯವನ್ನು ಒದಗಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಎಡಿಎಂ ಕೆ.ವಿ.ಶ್ರುತಿ ವಹಿಸಿದ್ದರು. ಯುಐಡಿಐಎಸ್‌ಟಿ ಯೋಜನೆ ವ್ಯವಸ್ಥಾಪಕ ಟಿ.ಶಿವನ್ ಜಿಲ್ಲೆಯ ಆಧಾರ್ ಕುರಿತು ಸ್ಥಿತಿ ಮಾಹಿತಿಯನ್ನು ವಿವರಿಸಿದರು. ಕಂದಾಯ ವಸೂಲಿ ತಹಸೀಲ್ದಾರ್ ಕೆ.ವಿ.ಶಶಿಕುಮಾರ್, ಐಟಿ ಮಿಷನ್ ಡಿಪಿಎಂ ಕಪಿಲದೇವ್, ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net